ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ರಾಜ್ಯದಲ್ಲೂ ತನ್ನ ಆರ್ಭಟ ನಡೆಸುತ್ತಿದೆ. ಇದರ ನಿಯಂತ್ರಣಕ್ಕೆ ಏನೇ ಕ್ರಮ ಕೈಗೊಂಡರೂ ಸಹ ದಿನದಿಂದ ದಿನಕ್ಕೆ ಸೋಂಕು ವ್ಯಾಪಕವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಲಾ – ಕಾಲೇಜುಗಳನ್ನು ಇದುವರೆಗೂ ಆರಂಭಿಸಿಲ್ಲ.
ಕೊರೋನಾಗೆ ಲಸಿಕೆ ಕಂಡು ಹಿಡಿಯುವವರೆಗೆ ಅಥವಾ ಇದು ನಿಯಂತ್ರಣಕ್ಕೆ ಬರುವವರೆಗೆ ಕನಿಷ್ಠ ಒಂದು ವರ್ಷಗಳ ಕಾಲ ಶಾಲೆಗಳನ್ನು ಆರಂಭಿಸದಂತೆ ಸರ್ಕಾರಕ್ಕೆ ಕೆಲವರು ಸಲಹೆ ನೀಡಿದ್ದರು. ಆದರೆ ಸರ್ಕಾರ ಈ ಕುರಿತು ಇನ್ನು ಯಾವ ತೀರ್ಮಾನಕ್ಕೂ ಬಾರದಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಶಾಲೆಯೊಂದನ್ನು ಒಂದು ವರ್ಷ ಕಾಲ ಬಂದ್ ಮಾಡಲು ಅಲ್ಲಿನ ಆಡಳಿತ ಮಂಡಳಿ ತೀರ್ಮಾನಿಸಿದೆ.
ಹೌದು, ಕೊರೊನಾ ಕಾರಣಕ್ಕಾಗಿ ಬೆಳ್ತಂಗಡಿ ತಾಲೂಕಿನ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲಮಾಧ್ಯಮ ವಿದ್ಯಾಲಯವನ್ನು ಒಂದು ವರ್ಷ ಕಾಲ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಪೋಷಕರು ಸಹ ಒಪ್ಪಿಗೆ ನೀಡಿದ್ದಾರೆನ್ನಲಾಗಿದೆ. ಎಲ್.ಕೆ.ಜಿ. ಇಂದ 10ನೇ ತರಗತಿವರೆಗೆ ವಸತಿ ನಿಲಯದೊಂದಿಗೆ ಉಚಿತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದ್ದು, 350ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಶಾಲಾ ಆಡಳಿತ ಮಂಡಳಿ ಕೈಗೊಂಡಿರುವ ತೀರ್ಮಾನದ ಕುರಿತು ಈಗಾಗಲೇ ಶಿಕ್ಷಣ ಸಚಿವರು ಹಾಗೂ ಇಲಾಖೆಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದ್ದು, ಸರ್ಕಾರದ ಪ್ರತಿಕ್ರಿಯೆ ಏನಿರಲಿದೆ ಎಂಬುದು ಕುತೂಹಲಕ್ಕೀಡು ಮಾಡಿದೆ.