ದೇಶದ ಜನತೆಗೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಹೈರಾಣಾಗಿಸಿದೆ. ಜೀವವೂ ಮುಖ್ಯ – ಜೀವನವೂ ಮುಖ್ಯವಾಗಿರುವುದರಿಂದ ಭೀತಿಯಿಂದಲೇ ಕೆಲಸ ಕಾರ್ಯಗಳನ್ನು ಮಾಡಬೇಕಿದೆ.
ಸಂತಸದ ಗಳಿಗೆಗೆ ಸಾಕ್ಷಿಯಾಗಬೇಕಿದ್ದ ಮದುವೆ ಸಮಾರಂಭಗಳು ಕೊರೊನಾ ಕಾರಣಕ್ಕೆ ಯಾಂತ್ರಿಕೃತವಾಗಿವೆ. ಒಂದು ಮದುವೆ ಸಮಾರಂಭದಲ್ಲಿ ಕೇವಲ ಐವತ್ತು ಜನ ಮಾತ್ರ ಭಾಗವಹಿಸಬೇಕಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ.
ಇಷ್ಟೆಲ್ಲಾ ನಿರ್ಬಂಧಗಳೊಂದಿಗೆ ನಡೆಯಲು ಸಿದ್ಧವಾಗಿದ್ದ ಮದುವೆಯೊಂದು ಕೊರೊನಾ ಕಾರಣಕ್ಕೆ ರಾತ್ರೋರಾತ್ರಿ ರದ್ದಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಯುವಕನ ಮದುವೆ ಗುಳೇದಗುಡ್ಡದ ಯುವತಿಯೊಂದಿಗೆ ಶುಕ್ರವಾರ ನಿಶ್ಚಯವಾಗಿದ್ದು, ಇದರ ಮಧ್ಯೆ ಗುರುವಾರದಂದು ವರನ ತಾಯಿಗೆ ಕೊರೊನಾ ಪಾಸಿಟಿವ್ ಎಂಬ ವರದಿ ಅಧಿಕಾರಿಗಳಿಗೆ ಲಭ್ಯವಾಗಿದೆ. ತಕ್ಷಣವೇ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಉಭಯ ಕುಟುಂಬದವರ ಮನವೊಲಿಸಿ ಮದುವೆಯನ್ನು ನಿಲ್ಲಿಸಿದೆ.