ಇಂದು ಐತಿಹಾಸಿಕ ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಕೊರೊನಾದಿಂದಾಗಿ ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇಂದಿನಿಂದ 9 ದಿನಗಳ ಕಾಲ ನವ ದುರ್ಗೆಯರ ಪೂಜೆ ನಡೆಯುತ್ತದೆ.
ಈ ವರ್ಷ ದಸರಾ ಉದ್ಘಾಟನೆಯನ್ನು ಜಯದೇವ ಆಸ್ಪತ್ರೆಯ ಡಾ.ಸಿ.ಎನ್. ಮಂಜುನಾಥ್ ಮಾಡಿದ್ದಾರೆ. ದೇಶದ ಎಲ್ಲಾ ವೈದ್ಯರು, ನರ್ಸ್ ಪರವಾಗಿ ಮಂಜುನಾಥ್ ಅವರು ದಸರಾ ಉದ್ಘಾಟಿಸಿರುವುದು ಕೊರೊನಾ ವಾರಿಯರ್ಸ್ ಗೆ ಸಿಕ್ಕ ಗೌರವವೇ ಸರಿ.
ಉದ್ಘಾಟನೆ ನಂತರ ಮಾತನಾಡಿರುವ ಡಾ.ಮಂಜುನಾಥ್, ಇದು ನನ್ನ ಸೌಭಾಗ್ಯ. ಇಡೀ ದೇಶದ ನರ್ಸ್‌ಗಳು, ವೈದ್ಯರು, ಕೊರೊನಾ ವಾರಿಯರ್‌ಗಳ ಪರವಾಗಿ ನಾನು ದಸರಾ ಉದ್ಘಾಟನೆ ಮಾಡಿದ್ದೇನೆ. ಇಂತಹದೊಂದು ಗೌರವ ನೀಡಿದ ಸರ್ಕಾರಕ್ಕೆ ನನ್ನ ಅನಂತ ಧನ್ಯವಾದಗಳು. ಕೊರೊನಾ ಕಳಂಕವಲ್ಲ ಅದೊಂದು ಆತಂಕದ ರೋಗ. ನಿಮ್ಮ ಸುರಕ್ಷತೆಯಲ್ಲಿ ನೀವಿದ್ದರೆ ಅದರಿಂದ ದೂರ ಉಳಿಯಬಹುದು ಎಂದಿದ್ದಾರೆ.
ಇನ್ನು ಕೊರೊನಾಗೆ ಈ ವರ್ಷ ಲಸಿಕೆ ಸಿಗುವುದು ಬಹುತೇಕ ಸಾಧ್ಯವಿಲ್ಲ. ಮುಂದಿನ ವರ್ಷ ಲಸಿಕೆ ಸಿಗಲಿದೆ. ಅಲ್ಲಿಯವರೆಗೂ ನಾವು ಜಾಗರೂಕರಾಗಿರಬೇಕಾಗುತ್ತದೆ. ಮೈ ಮರೆತರೆ ಕೊರೊನಾ ಗ್ಯಾರಂಟಿ ಎಂದು ಹೇಳಿದ್ದಾರೆ.
ಹಾಗೆಯೇ ಕೊರೊನಾ ಸಮಯದಲ್ಲಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಗಳನ್ನು ಹುತಾತ್ಮರನ್ನಾಗಿ ನೋಡಬೇಕು. ಈಗಾಗಲೇ ಸಾಕಷ್ಟು ಜನ ವೈದ್ಯರು, ನರ್ಸ್‌ಗಳು ಕೊರೊನಾಗೆ ಬಲಿಯಾಗಿದ್ದಾರೆ. ವೈದ್ಯರ ಮೇಲಿನ ಹಲ್ಲೆ ನಿಲ್ಲಬೇಕು. ಇದಕ್ಕಾಗಿ ಸರ್ಕಾರ ಸರಿಯಾದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.