ಮಾರಣಾಂತಿಕ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರಿಗೆ ರಾಜ್ಯ ಸರ್ಕಾರ ಭರ್ಜರಿ ಬಂಪರ್ ಸುದ್ದಿಯೊಂದನ್ನು ನೀಡಿದೆ.
ಇವರುಗಳಿಗೆ ವಿಶೇಷ ಭತ್ಯೆ ನೀಡಲು ತೀರ್ಮಾನಿಸಲಾಗಿದ್ದು, ಕೋವಿಡ್ ಆಸ್ಪತ್ರೆಗಳ ವಾರ್ಡ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ 25 ಸಾವಿರ ರೂಪಾಯಿ ಹಾಗೂ ಕೊರೊನಾ ಸೋಂಕಿತ ಮತ್ತು ಶಂಕಿತರ ಸಂಪರ್ಕಕ್ಕೆ ಒಳಗಾಗುವವರಿಗೆ ಮಾಸಿಕ 10 ಸಾವಿರ ರೂಪಾಯಿ ಭತ್ಯೆ ನೀಡಲು ಸಿದ್ಧತೆ ನಡೆದಿದೆ.
ಕರ್ತವ್ಯ ನಿರತರ ವಿವರವನ್ನು ರಾಜ್ಯ ಸರ್ಕಾರ ಕೇಳಿದ್ದು, ಈ ಕುರಿತು ಈಗಾಗಲೇ ರಾಜ್ಯ ಡಿಜಿಪಿ ಹಾಗೂ ಆರೋಗ್ಯ ಇಲಾಖೆಗೆ ಒಳಾಡಳಿತ ಇಲಾಖೆ ಸೂಚಿಸಿದೆ ಎಂದು ಹೇಳಲಾಗಿದೆ. ಆದರೆ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಜೊತೆ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಗೃಹರಕ್ಷಕ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಹ ಕೊರೊನಾ ಕರ್ತವ್ಯದಲ್ಲಿದ್ದು, ಅವರುಗಳಿಗೂ ವಿಶೇಷ ಭತ್ಯೆ ನೀಡುವಂತೆ ಆಗ್ರಹ ಕೇಳಿ ಬರುತ್ತಿದೆ.