ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿ ದಿನವೂ 11 ಸಾವಿರಕ್ಕೂ ಅಧಿಕ ಕೇಸ್ ಗಳು ಪತ್ತೆಯಾಗುತ್ತಿವೆ. ರಾಜಧಾನಿಯಲ್ಲಿ ಪರಿಸ್ಥಿತಿ ಕೈಮಿರುತ್ತಿದ್ದು, ಟಫ್ ರೂಲ್ಸ್ ಜಾರಿ ಮಾಡಬೇಕು ಎಂಬುದು ಹಲವರ ಒತ್ತಾಯ. ಆದರೆ ಈ ಬಗ್ಗೆ ಸರ್ಕಾರದ ಸಚಿವರುಗಳಲ್ಲೇ ಭಿನ್ನಾಭಿಪ್ರಾಯ ತಲೆದೋರಿದೆ ಎನ್ನಲಾಗಿದೆ.
ಕೊರೊನಾ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಜಾರಿ ಮಾಡಬೇಕಾದ ನಿಯಮಗಳ ಬಗ್ಗೆ ಚರ್ಚಿಸಲು ಇಂದು ನಡೆದ ಸಚಿವರ ಸಭೆಯಲ್ಲಿ ಲಾಕ್ ಡೌನ್ ಜಾರಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಕಂದಾಯ ಸಚಿವ ಆರ್. ಅಶೋಕ್ ಲಾಕ್ ಡೌನ್ ಜಾರಿಯನ್ನು ವಿರೋಧಿಸಿದ್ದಾರೆ. ಜನಸಾಮಾನ್ಯರು ಹಾಗೂ ಸರ್ಕಾರದ ಆರ್ಥಿಕ ಸ್ಥಿತಿಗತಿ ದೃಷ್ಟಿಯಲ್ಲಿಟ್ಟುಕೊಂಡು ಕಠಿಣ ನಿಯಮ ಜಾರಿ ಮಾಡೋಣ ಎಂದು ಹೇಳಿದ್ದಾರೆ.
ಆದರೆ ಆರೋಗ್ಯ ಸಚಿವ ಡಾ,ಸುಧಾಕರ್ ಅವರು ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದ್ದು, ವೇಗವಾಗಿ ಹರಡುತ್ತಿದೆ. ಅದರಲ್ಲೂ ಬೆಂಗಳೂರಿನ ಸ್ಥಿತಿ ಕೈಮೀರುತ್ತಿದೆ. ಹಾಗಾಗಿ ಲಾಕ್ ಡೌನ್ ಜಾರಿ ಮಾಡುವಂತೆ ತಜ್ಞರು ಸಲಹೆ ನೀಡಿದ್ದರು. ಈ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಬಹುತೇಕ ಸಚಿವರು ಲಾಕ್ ಡೌನ್ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಶೇಷ ಕಠಿಣ ನಿಯಮವನ್ನು ಯಾವ ರೀತಿ ಜಾರಿಗೆ ತರಬೇಕು ಎಂಬ ಬಗ್ಗೆ ಸರ್ಕಾರವೇ ಗೊಂದಲದಲ್ಲಿದ್ದು, ಸಚಿವರಲ್ಲಿಯೇ ಸಮನ್ವಯತೆ ಇಲ್ಲ ಎನ್ನಲಾಗುತ್ತಿದೆ.