ಕೊರೊನಾ ಹೆಮ್ಮಾರಿಯ ಛಾಯೆ ದೇಶದಲ್ಲಿ ಇನ್ನೂ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿರಾರು ಕೊರೊನಾ ಸೋಂಕಿತರು ಹೊಸದಾಗಿ ದಾಖಲಾಗುತ್ತಲೇ ಇದ್ದಾರೆ. ಇನ್ನು ರಾಜ್ಯದಲ್ಲಿಯೂ ದಿನಕ್ಕೆ ನಾಲ್ಕರಿಂದ ಐದು ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರ ಮಧ್ಯೆ ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗುವ ಆತಂಕ ಎದುರಾಗಿದೆ.
ಹೌದು, ಆರ್ಥಿಕ ಸಂಕಷ್ಟದಿಂದಾಗಿ ಅನೇಕ ಅಂಗಡಿ ಮುಂಗಟ್ಟುಗಳು ಈಗಾಗಲೇ ಮುಚ್ಚಿವೆ. ಜನ ಬರದೆ ಆದಾಯ ಸಿಗದೆ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿಯೇ ಬೆಂಗಳೂರಿನಲ್ಲಿ ಸುಮಾರು 50 ಸಾವಿರ ಅಂಗಡಿ ಮುಂಗಟ್ಟುಗಳು ತೆರೆಯೋ ಸಾಧ್ಯತೆಗಳು ಇಲ್ಲ ಅಂತಿದ್ದಾರೆ ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ್.
ಸರಿಸುಮಾರು ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಅಂಗಡಿಗಳೆಲ್ಲಾ ಸೇರಿ ನಾಲ್ಕು ಲಕ್ಷ ಮಳಿಗೆಗಳು ಇವೆ ಎನ್ನಲಾಗಿದೆ. ನಾಲ್ಕು ಲಕ್ಷದಲ್ಲಿ ಸುಮಾರು 50 ಸಾವಿರ ಅಂಗಡಿ ಮುಂಗಟ್ಟುಗಳು ಮುಚ್ಚುವ ಸಾಧ್ಯತೆ ಇದೆ. ಏಕೆಂದರೆ ಕೊರೊನಾದಿಂದಾಗಿ ನಷ್ಟ ಅನುಭವಿಸುತ್ತಿದ್ದ ಅಂಗಡಿ ಮಾಲೀಕರು ಹಳ್ಳಿಗಳಿಗೆ ಮರಳಿದ್ದಾರೆ. ಅಲ್ಲದೆ ಕಂಡ ಕಂಡಲ್ಲಿ ಈ ಮಳಿಗೆ ಬಾಡಿಗೆಗಿದೆ ಎಂಬ ಬೋರ್ಡ್‌ಗಳು ಕಾಣುತ್ತಿವೆ. ಹೀಗಾಗಿ ಬೆಂಗಳೂರು ಒಂದರಲ್ಲೇ ಅನೇಕ ಶಾಪ್ ಗಳು ಖಾಲಿಯಾಗಿವೆಯಂತೆ.