ಕೊರೊನಾದಿಂದಾಗಿ ಜನರ ಜೀವನ ಬೀದಿಗೆ ಬಿದ್ದಿದೆ. ಕೈಯಲ್ಲಿದ್ದ ಕೆಲಸವನ್ನು ಕಳೆದುಕೊಂಡು ಕುಟುಂಬ ನಿರ್ವಹಿಸಲು ಸಾಧ್ಯವಾಗದೇ ಉಪವಾಸ ಇರುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಉದ್ಯಮದ ಮೇಲೂ ಕೊರೊನಾ ಕರಿಛಾಯೆ ಬಿದ್ದಿದೆ. ಇನ್ನೂ ಅನೇಕ ಉದ್ಯಮಗಳು ಚೇತರಿಸಿಕೊಳ್ಳಲಾಗದೇ ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ ಬಸ್ ಉದ್ಯಮ ಕೂಡ ಒಂದು. ಸರ್ಕಾರದ ಸೂಚನೆಯಂತೆ 50 ರಷ್ಟು ಜನ ಮಾತ್ರ ಬಸ್‌ನಲ್ಲಿ ಪ್ರಯಾಣಿಸಬೇಕೆಂಬ ನಿಯಮ ಇರೋದ್ರಿಂದ ಬಸ್ ಮಾಲೀಕರು ಕಂಗೆಟ್ಟು ಹೋಗಿದ್ದಾರೆ.
ಇನ್ನು ಕೊರೊನಾ ಭಯದಿಂದ ಬಸ್‌ಗಳ ಬಳಿ ಯಾರೂ ಸುಳಿಯುತ್ತಿಲ್ಲ. ಸುರಕ್ಷತಾ ದೃಷ್ಟಿಯಿಂದ ಬಸ್‌ಗಳನ್ನು ಹತ್ತುತ್ತಿಲ್ಲ. ತಮ್ಮ ಸ್ವಂತ ವಾಹನದಲ್ಲಿಯೇ ಪ್ರಯಾಣ ಮಾಡುತ್ತಿದ್ದಾರೆ. ಹೀಗಿರುವಾಗ ಬಸ್ ಮಾಲೀಕರಿಗೆ ದುಡಿಮೆಯೇ ಇಲ್ಲದೆ ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ಬಸ್ ರಸ್ತೆಗೆ ಇಳಿಯದೇ ಇದ್ದರೂ ತೆರಿಗೆಯಿಂದ ಮುಕ್ತಿ ಇಲ್ಲ. ತೆರಿಗೆ ಕಟ್ಟಲೇ ಬೇಕಾದ ಪರಿಸ್ಥಿತಿ ಇದೆ.
ಹೀಗಿರುವಾಗ ಮುಂದೆ ದಾರಿ ಕಾಣದೆ ಬಸ್‌ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಬಸ್ ಮಾಲೀಕರು. ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಸಾರಿಗೆ ಇಲಾಖೆಗೆ ನೀಡಿದ್ದಾರೆ. ಸಾರಿಗೆ ಇಲಾಖೆಗೆ ಬಸ್‌ಗಳನ್ನು ಒಪ್ಪಿಸಿದರೆ ತೆರಿಗೆ ಕಟ್ಟುವುದರಿಂದ ಪಾರಾಗಬಹುದೆಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ.