ನವದೆಹಲಿ: ಕೊರೊನಾತಂಕದ ನಡುವೆ ದೇಶದ ಜನತೆಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ದಾಖಲೆಯ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 75,809 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ 24 ಗಂಟೆಯಲ್ಲಿ ದೇಶದಲ್ಲಿ 75,809 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 42,80,423ಕ್ಕೆ ಏರಿಕೆಯಾಗಿದೆ.
24ಗಂಟೆಯಲ್ಲಿ ದೇಶದಲ್ಲಿ 1,133 ಜನರು ಮಹಾಮಾರಿಗೆ ಸಾವನ್ನಪ್ಪಿದ್ದಾರೆ. ಈ ಮೂಲಕ ಈ ವರೆಗೆ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 72,775ಕ್ಕೆ ಏರಿಕೆಯಾಗಿದೆ.
33,23,951 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 10,98,621 ಜನರಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿದ್ದು, ಈ ವರೆಗೆ 5,06,50,128 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಕೊರೊನಾ ಸೊಂಕಿತರ ಚೇತರಿಕೆ ಪ್ರಮಾಣ ಶೇ.77ರಷ್ಟು ಹೆಚ್ಚಿದೆ.
ಇನ್ನು ರಾಜ್ಯದಲ್ಲಿ ಕೂಡ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು, ನಿನ್ನೆ 5,773 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದ್ದು, ನಿನ್ನೆ 8015 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ರಾಜ್ಯದಲ್ಲಿ 3,00,770 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.