ಕೊರೊನಾ ಮಹಾಮಾರಿ ಯಾವಾಗ ದೇಶ ಬಿಟ್ಟು ಹೋಗುತ್ತದೆಯೋ ಅಂತಾ ಇಡೀ ದೇಶವೇ ಕಾಯ್ತಾ ಇದೆ. ಅತ್ತ ಅನೇಕ ದೇಶಗಳು ಕೊರೊನಾ ವಿರುದ್ದದ ಹೋರಾಟಕ್ಕೆ ಔಷಧ ಕಂಡು ಹಿಡಿಯುವಲ್ಲಿ ನಿರತವಾಗಿದ್ದಾರೆ. ಇನ್ನು ನಮ್ಮ ರಾಜ್ಯದಲ್ಲೂ ದಿನಕ್ಕೆ 5 ಸಾವಿರಕ್ಕೂ ಅಧಿಕ ಸೋಂಕಿತರು ಒಂದೇ ದಿನ ಪತ್ತೆಯಾಗುತ್ತಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳದ್ದು ಒಂದು ಲೆಕ್ಕವಾದರೆ ಬೆಂಗಳೂರಿನದ್ದು ಒಂದು ಲೆಕ್ಕವಾಗುತ್ತಿದೆ.
ಕರ್ನಾಟಕದಲ್ಲಿ ಸೋಂಕಿತ ಜಿಲ್ಲೆಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಪ್ರತಿ ನಿತ್ಯ 2 ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದರ ಮಧ್ಯೆ ಕಳೆದ ವಾರದಿಂದ ಸಮಾಧಾನಕರ ಸಂಗತಿಯೊಂದು ಹೊರ ಬೀಳುತ್ತಿದೆ. ಅದೇ ಸೋಂಕಿತರು ಗುಣಮುಖವಾಗುತ್ತಿರುವುದು. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ರಿಕವರಿ ರೇಟ್ ಹೆಚ್ಚಾಗುತ್ತಿದೆ. ಪ್ರತಿ ನಿತ್ಯ ಸೋಂಕಿತರಿಗಿಂತ ಡಿಸ್ಚಾರ್ಜ್ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಇಲ್ಲಿಯವರೆಗೆ ಬೆಂಗಳೂರಿನಲ್ಲಿ 69572 ಸೋಂಕಿತರ ಪೈಕಿ 35063 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 33308 ಜನ ಸೋಂಕಿತರ ಸಕ್ರಿಯ ಪ್ರಕರಣಗಳು ಬೆಂಗಳೂರಿನಲ್ಲಿ ಇವೆ. ಕಳೆದ ವಾರದಲ್ಲಿ 16060 ಕೊರೊನಾ ಪ್ರಕರಣ ದಾಖಲಾಗಿದ್ದವು. ಆದರೆ ಅದೇ ವಾರ 18207 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.