ಮೂರು ದಿನಗಳ ಹಿಂದಷ್ಟೇ ಪ್ಲಾಸ್ಮಾ ಥೆರಪಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿದ್ದ ಕುರಿತು ವರದಿಯಾಗಿತ್ತು. ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತೊಂದು ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಮಧ್ಯ ವಯಸ್ಕ ವ್ಯಕ್ತಿ ಪ್ಲಾಸ್ಮಾ ಥೆರಪಿಯಿಂದ ಚೇತರಿಸಿಕೊಂಡಿದ್ದಾರೆಂದು ಹೇಳಲಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಎರಡನೇ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾದಂತಾಗಿದೆ.
ಕೊರೊನಾ ಸೋಂಕಿನ ಜೊತೆಗೆ ಈ ವ್ಯಕ್ತಿ ಮಧುಮೇಹದಿಂದಲೂ ಬಳಲುತ್ತಿದ್ದು, ಮೇ 25 ರಂದು ಇವರಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಇದೀಗ ಬಹುತೇಕ ಚೇತರಿಸಿಕೊಂಡಿರುವ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಅಲ್ಲದೇ ಶೀಘ್ರದಲ್ಲೇ ಡಿಸ್ ಚಾರ್ಜ್ ಮಾಡುವ ಸೂಚನೆಯನ್ನು ವೈದ್ಯರು ನೀಡಿದ್ದಾರೆ.