ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಭಾನುವಾರ ಒಂದೇ ದಿನ ಬರೋಬ್ಬರಿ 1925 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 23,474 ಕ್ಕೆ ತಲುಪಿದ್ದು ಈವರೆಗೆ 372 ಮಂದಿ ಮೃತಪಟ್ಟಿದ್ದಾರೆ.
ಇವರ ಮಧ್ಯ ನಡೆದಿರುವ ಕರುಣಾಜನಕ ಘಟನೆಯೊಂದು ಎಲ್ಲರ ಮನ ಕಲಕಿದೆ. ಈ ಮಹಾಮಾರಿಗೆ 17 ದಿನದ ಹಸುಗೂಸು ಬಲಿಯಾಗಿದ್ದು, ಮಗುವಿನ ತಂದೆ-ತಾಯಿಗೂ ಸೋಂಕು ಇರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ತಮ್ಮ ಪುಟ್ಟ ಕಂದನನ್ನು ಕೊನೆಯದಾಗಿ ದರ್ಶನ ಮಾಡಲೂ ಅವರುಗಳಿಗೆ ಸಾಧ್ಯವಾಗಿಲ್ಲ.
ಬಿಬಿಎಂಪಿ ಸಿಬ್ಬಂದಿ ಮಗುವಿನ ಮೃತದೇಹ ತೆಗೆದುಕೊಂಡು ಹೋಗಿ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಘಟನೆಯ ವಿವರ ತಿಳಿದ ಚಿತಾಗಾರದ ಸಿಬ್ಬಂದಿ ಕಣ್ಣೀರು ಸುರಿಸಿದ್ದಾರಲ್ಲದೆ ವಿದ್ಯುತ್ ಚಿತಾಗಾರದ ಸರ್ಕಾರಿ ಶುಲ್ಕ 250 ರೂಪಾಯಿಗಳನ್ನು ಸ್ವತಃ ತಾವೇ ಭರಿಸಿದ್ದಾರೆ. ಅಂತ್ಯಕ್ರಿಯೆ ಬಳಿಕ ಮಗುವಿನ ಚಿತಾಭಸ್ಮವನ್ನು ಕುಟುಂಬಸ್ಥರಿಗೆ ನೀಡಲಾಗಿದೆ.