ಕೊರೊನಾದಿಂದಾಗಿ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಕೊರೊನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ ಆಗಿದ್ರಿಂದ ಸರ್ಕಾರಿ ಕಚೇರಿ ಸೇರಿದಂತೆ ಬಹುತೇಕ ಖಾಸಗಿ ಕಚೇರಿಗಳಲ್ಲೂ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಕೊರೊನಾ ಇಳಿಮುಖ ಆಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಬಯೋಮೆಟ್ರಿಕ್ ಮೂಲಕ ಹಾಜರಾತಿ ಹಾಕೋದನ್ನು ಪುನರ್ ಪ್ರಾರಂಭಿಸಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಸಿ. ಹರ್ಷರಾಣಿ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸುತ್ತೋಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಬಯೋಮೆಟ್ರಿಕ್ ಹಾಜರಾತಿ ಪುನರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಬಯೋಮೆಟ್ರಿಕ್ ಹಾಜರಾತಿ ಪಕ್ಕದಲ್ಲೇ ಸ್ಯಾನಿಟೈಸರ್ ವ್ಯವಸ್ಥೆ ಮಾಡಿರೋದ್ರಿಂದ ಹಾಜರಾತಿ ಹಾಕುವ ಪ್ರತಿಯೊಬ್ಬ ನೌಕರ ಮೊದಲು ಬೆರಳು ಹಾಗೂ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಹಾಜರಾತಿ ಹಾಕಲು ತಿಳಿಸಲಾಗಿದೆ. ಹಾಗೆಯೇ ಕಚೇರಿಗಳಿಗೆ ಹಾಜರಾತಿ ಪಕ್ಕದಲ್ಲಿ ಸ್ಯಾನಿಟೈಸರ್ ಇಡುವಂತೆ ಸೂಚಿಸಿದ್ದಾರೆ.