ಬೆಂಗಳೂರು: ಕೊರೊನಾ 2ನೇ ಅಲೆ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಚಿಕ್ಕವಯಸ್ಸಿನವರು 20-40 ವರ್ಷದ ಯುವಕರು ಸಾವನ್ನಪ್ಪುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಯುವಕರ ಸಾವು ಹೆಚ್ಚಲು ಕಾರಣವೇನು..? ಈ ಸಾವು ತಡೆಯಲು ಏನು ಮಾಡಬೇಕು…? ಎಂಬ ಬಗ್ಗೆ ಡಾ.ರಾಜು ಕೃಷ್ಣಮೂರ್ತಿ ಮಹತ್ವದ ಮಾಹಿತಿಯೊಂದನ್ನು ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವ ಜನರಿಗಿಂತ ಇಂದು ಭಯದಿಂದಲೇ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ಪಾಸಿಟಿವ್ ಎಂದಾಕ್ಷಣ ಆಸ್ಪತ್ರೆಗೆ ದಾಖಲಾಗುವುದು, ಸೋಂಕಿತರು ಆಕ್ಸಿಜನ್ ಸಿಗದೇ ಸಾಯುತ್ತಿದ್ದಾರೆ ಎಂಬ ಸುದ್ದಿಗಳು, ಮಾಧ್ಯಮಗಳು ಸೃಷ್ಟಿಸುತ್ತಿರುವ ಆತಂಕದ ವಾತಾವರಣ…..ಕೊರೊನಾ ಇದೊಂದು ಮಹಾಮಾರಿ ವಾಸಿಯಾಗದ ಕಾಯಿಲೆ ಎಂಬ ರೀತಿಯಲ್ಲಿ ತೋರಿಸುತ್ತಿರುವ ಚಿತ್ರಣ…..ಇಂತಹ ಸುದ್ದಿ ಜನರಲ್ಲಿನ ಆತ್ಮವಿಶ್ವಾಸವೇ ಉಡುಗಿ ಹೋಗುವಂತೆ ಮಾಡುತ್ತಿದೆ. ಈ ಭಯ, ಆತಂಕದ ವಾತಾವರಣದಿಂದಲೇ ಇಂದು ಕೊರೊನಾ ಸೋಂಕು ಎಂದಾಕ್ಷಣ ಜೀವಭಯದಲ್ಲೇ ಯುವಕರು ಪ್ರಾಣಕಳೆದುಕೊಳ್ಳುತ್ತಿದ್ದಾರೆ ಎಂದು ಡಾ.ರಾಜು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಸೋಂಕು ಸಾಮಾನ್ಯವಾಗಿ ಯಾರಲ್ಲಿ ಇಮ್ಯುನಿಟಿ ಲೆವಲ್ ಕಡಿಮೆಯಿರುತ್ತೋ ಅಂತವರಲ್ಲಿ ಅತಿ ವೇಗವಾಗಿ ಹರಡುತ್ತದೆ. ಉತ್ತಮವಾದ ಆಹಾರ ಸೇವನೆ, ಜೀವನ ಶೈಲಿ, ಹವ್ಯಾಸಗಳು ಕೂಡ ಇಮ್ಯುನಿಟಿಯನ್ನು ಸುಧಾರಿಸಬಲ್ಲದು. ಚಿಕ್ಕಮಕ್ಕಳಲ್ಲಿ ಇಮ್ಯುನಿಟಿ ಉತ್ತಮವಾಗಿರುವುದರಿಂದ ಅವರಲ್ಲಿ ಸೋಂಕಿನಿಂದ ಅಷ್ಟೊಂದು ತೊಂದರೆಯಾಗದು. 20-40 ವರ್ಷದವರಲ್ಲಿ ಕೂಡ ಇಮ್ಯುನಿಟಿ ಚೆನ್ನಾಗಿರುತ್ತದೆ. ಆದರೆ ಕೊರೊನಾ ಎರಡನೇ ಅಲೆಯಲ್ಲಿ ಈ ವಯಸ್ಸಿನವರೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಕಾರಣ ಅವರಲ್ಲಿನ ಭಯ. ನಮ್ಮಲ್ಲಿನ ಭಯ ಕೂಡ ಇಮ್ಯುನಿಟಿ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ.ರಾಜು ಹೇಳಿದ್ದಾರೆ.
ಕೊರೊನಾ ಎರಡನೇ ಅಲೆಯಿಂದ ಪಾರಾಗುವ ಬಗೆಯಾದರೂ ಹೇಗೆ? ಜನರು ಪಾಲಿಸಬೇಕಾದ ನಿಯಮವಾದರೂ ಏನು? ಎಂಬಿತ್ಯಾದಿ ಮಹತ್ವದ ಮಾಹಿತಿಗಾಗಿ ಡಾ.ರಾಜು ಅವರ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.