ಸಾಂಕ್ರಾಮಿಕ ರೋಗ ಕೊರೊನಾ ಸೋಂಕು ಯಾರಿಗಾದರೂ ತಗಲಿದ ವೇಳೆ ಅವರ ನಿಕಟ ಸಂಪರ್ಕಕ್ಕೆ ಬಂದವರೆಲ್ಲರಿಗೂ ವ್ಯಾಪಿಸುತ್ತದೆ. ಅದರಲ್ಲೂ ಕುಟುಂಬದ ಒಬ್ಬ ಸದಸ್ಯರು ಸೋಂಕು ಪೀಡಿತರಾದರೆ ಇತರೆಯವರೂ ಕೂಡ ಬಹುಬೇಗ ಸೋಂಕಿಗೊಳಗಾಗುತ್ತಾರೆ. ಹೀಗೆ ಸೋಂಕು ಪೀಡಿತರಾದ ಕುಟುಂಬವೊಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಊರಿಗೆ ಬಂದ ವೇಳೆ ಅಚ್ಚರಿಗೊಳಗಾದ ಘಟನೆ ನಡೆದಿದೆ.
ಹೌದು, ಇಂತಹುದೊಂದು ಅಪರೂಪದ ವಿದ್ಯಾಮಾನ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತಲ್ತಾರೆ ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ಪುಟ್ಟಯ್ಯ, ಅವರ ಪತ್ನಿ, ಮಗಳು, ಅಳಿಯ ಎಲ್ಲರೂ ಕೊರೊನಾ ಸೋಂಕಿಗೊಳಗಾದ ಕಾರಣ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
ಬಡ ಕುಟುಂಬದ ಪುಟ್ಟಯ್ಯ ಅವರಿಗೆ ಎರಡು ಎಕರೆ ಜಮೀನು ಇದ್ದು, ನಾಟಿಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಕೊರೊನಾ ತಗುಲಿದ ಪರಿಣಾಮ ಅನಿವಾರ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಹೀಗಾಗಿ ತಮ್ಮ ಗದ್ದೆ ಎಲ್ಲಿ ಪಾಳು ಬೀಳುವುದೋ ಎಂಬ ಚಿಂತೆ ಅವರನ್ನು ಕಾಡಿದ್ದು ಆದರೆ ಗ್ರಾಮಸ್ಥರು ಮಾತ್ರ ಇದಕ್ಕೆ ಅವಕಾಶ ಕೊಟ್ಟಿಲ್ಲ. ಪುಟ್ಟಯ್ಯ ಆಸ್ಪತ್ರೆಯಿಂದ ಮರಳಿ ಬರುವ ವೇಳೆಗಾಗಲೇ ಗದ್ದೆ ಉಳುಮೆ ಮಾಡಿ ನಾಟಿ ಮಾಡಲಾಗಿದ್ದು, ಇದನ್ನು ಕಂಡು ಪುಟ್ಟಯ್ಯ ಹಾಗೂ ಅವರ ಕುಟುಂಬ ಗ್ರಾಮಸ್ಥರ ಸಹಕಾರಕ್ಕೆ ಮನದುಂಬಿ ಕೃತಜ್ಞತೆ ಹೇಳಿದ್ದಾರೆ.