ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿಗೆ ಯಾವುದೇ ರೋಗ ಲಕ್ಷಣಗಳಿಲ್ಲವಾದರೂ ಪರೀಕ್ಷೆ ವೇಳೆ ಕೊರೊನಾ ಇರುವುದು ಪತ್ತೆಯಾಗುತ್ತಿದೆ. ರೋಗ ಲಕ್ಷಣಗಳಿಲ್ಲದವರು ಒಂದೊಮ್ಮೆ ಇತರರ ಸಂಪರ್ಕಕ್ಕೆ ಬಂದ ವೇಳೆ ಸೋಂಕು ವ್ಯಾಪಿಸಲು ಕಾರಣವಾಗುತ್ತದೆ. ಹೀಗಾಗಿ ಕೆಲವೊಂದು ಲಕ್ಷಣಗಳು ಕಂಡುಬಂದರೆ ಮನೆಯಲ್ಲಿಯೇ ಕ್ವಾರಂಟೈನ್ ಆಗುವ ಮೂಲಕ ಪ್ರಥಮ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಸೋಂಕಿಗೊಳಗಾದವರಿಗೆ ಕೊರೊನಾ ರೋಗ ಲಕ್ಷಣಗಳಾದ ಕೆಮ್ಮು, ಶೀತ, ನೆಗಡಿ, ಮೂಗಿನಲ್ಲಿ ತುರಿಕೆ ಕಾಣಿಸಿಕೊಳ್ಳುವ ಸಮಸ್ಯೆ ಎದುರಾಗಲಿದ್ದು, ನೆಗಡಿ ಕಾಣಿಸಿಕೊಂಡ ವೇಳೆ ಪೇಪರ್ ಕ್ಯಾಪ್ಸುಲ್ ಅಥವಾ ನೀಲಗಿರಿ ತೈಲವನ್ನು ಬಿಸಿನೀರಿನಲ್ಲಿ ಹಾಕಿ ಅದರ ಹಬೆ ತೆಗೆದುಕೊಳ್ಳುವುದು ಸೂಕ್ತ ಎನ್ನಲಾಗಿದೆ. ಅದೇ ರೀತಿ ಗಂಟಲು ಉರಿ ಮತ್ತು ತುರಿಕೆ ಕಾಣಿಸಿಕೊಂಡ ವೇಳೆ ಮೆಡಿಕಲ್ ಶಾಪ್ ನಲ್ಲಿ ಸಿಗುವ ಗಾರ್ಗಲರ್ ಅನ್ನು ಬಿಸಿನೀರಿಗೆ ಬೆರೆಸಿ ಗಾರ್ಗಲ್ ಮಾಡಿದರೆ ಉರಿ ಮತ್ತು ತುರಿಕೆ ಕಡಿಮೆಯಾಗುತ್ತದೆ ಎನ್ನಲಾಗಿದೆ. ಈ ವಿಧಾನಗಳ ಮೂಲಕ ರೋಗ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಕೆಮ್ಮು ಕಾಣಿಸಿಕೊಂಡವ ವೇಳೆ ಗಾರ್ಗಲ್ ಜೊತೆಗೆ ಹಬೆ ತೆಗೆದುಕೊಳ್ಳಬೇಕು ಹಾಗೂ ವಿಟಮಿನ್ ಡಿ ಮತ್ತು ಇ ಮಾತ್ರೆ ಸೇವಿಸುವುದರ ಜೊತೆಗೆ ಯಥೇಚ್ಛವಾಗಿ ಬಿಸಿ ನೀರು ಕುಡಿಯಬೇಕು ಎಂದು ತಿಳಿಸಲಾಗಿದೆ. ಅಲ್ಲದೆ ಬಿಸಿ ಆಹಾರ ಸೇವಿಸುವುದು ಸೂಕ್ತ. ಮನೆಯಲ್ಲಿ ಗಾರ್ಗಲರ್, ವಿಟಮಿನ್ ಡಿ ಮತ್ತು ಇ, ಜಿಂಕ್ ಮಾತ್ರೆ, ಪೇಪರ್ ಕ್ಯಾಪ್ಸಲ್ ಅನುಕೂಲವಿದ್ದರೆ ಆಕ್ಸಿ ಮೀಟರ್, ಥರ್ಮಾಮೀಟರ್ ಇಟ್ಟುಕೊಳ್ಳುವುದು ಸೂಕ್ತ. ಆಕ್ಸಿ ಮೀಟರ್ ನಲ್ಲಿ ಒಂದೊಮ್ಮೆ ಆಕ್ಸಿಜನ್ ಮಟ್ಟ 90ಕ್ಕಿಂತ ಕಡಿಮೆ ಇದ್ದರೆ ಅಥವಾ ಥರ್ಮಾಮೀಟರ್ ನಲ್ಲಿ ಜ್ವರದ ತಾಪಮಾನ 100 ಡಿಗ್ರಿ ಮೀರಿದರೆ ತಕ್ಷಣವೇ ವೈದ್ಯರನ್ನು ಕಾಣುವುದು ಸೂಕ್ತ ಎಂದು ಹೇಳಲಾಗಿದೆ.