ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಪ್ರತಿಷ್ಠೆಯನ್ನು ಬಿಟ್ಟು ಕೊನೆಗೂ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಕರೆ ಮಾಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತವಾಗಿರುವುದರಿಂದ ಬಸ್ ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ನಾಲ್ಕು ದಿನಗಳಿಂದ ನಡೆಯುತ್ತಿರುವ ಮುಷ್ಕರದಿಂದಾಗಿ ಸಾರಿಗೆ ಇಲಾಖೆಗೂ ಅಪಾರ ನಷ್ಟವುಂಟಾಗಿದ್ದು, ಈ ನಡುವೆ ಸಚಿವ ಲಕ್ಷ್ಮಣ ಸವದಿ ಕೋಡಿಹಳ್ಳಿಯವರಿಗೆ ಕರೆ ಮಾಡಿ, ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದಾರೆ.
ಹೋರಾಟದಲ್ಲಿ ನಾವು ಗೆದ್ದಂತಲ್ಲ, ನೀವು ಸೋತಂತಲ್ಲ, ಮುಷ್ಕರವನ್ನು ಇನ್ನೂ ಮುಂದುವರೆಸುವುದು ಬೇಡ. ನಿನ್ನೆ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಚಾರಗಳನ್ನು ಜಾರಿಗೆ ತರಲು ಸಿದ್ಧ. 6ನೇ ವೇತನ ಆಯೋಗದ ಬಗ್ಗೆ ಇಂದು ನೀಡಿದ ಲಿಖಿತ ಆದೇಶ ಪತ್ರದಲ್ಲಿಲ್ಲ ಎಂದು ಗೊಂದಲಕ್ಕೀಡಾಗುವುದು ಬೇಡ. ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ.