ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಟ್ವಿಟರ್ ಅಭಿಯಾನ ಆರಂಭಿಸಿರುವ ಕಾಂಗ್ರೆಸ್, ಕೊರೊನಾದಿಂದ ಜನರು ಸಾಯುತ್ತಿದ್ದರೂ ಔಷಧ, ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ, ಆಸ್ಪತ್ರೆಗಳಲ್ಲಿ ಬೆಡ್ ವ್ಯವ್ಯಸ್ಥೆ ಕಲ್ಪಿಸಲೂ ಆಗುತ್ತಿಲ್ಲ ಒಂದಿಡಿ ವರ್ಷ ಅವಕಾಶ ನೀಡಿದರೂ ಯಾವುದೇ ಸಿದ್ಧತೆ ಮಾಡಿಕೊಳ್ಳದ ಸೋಂಕಿತ ಸರ್ಕಾರದ ವಿರುದ್ಧ ಜನತೆ ಧ್ವನಿಯೆತ್ತಬೇಕು ಎಂದು ಕರೆ ನೀಡಿದೆ.
ಒಂದು ವರ್ಷ ಸಮಯವಿದ್ದರೂ ರಾಜ್ಯ ಸರ್ಕಾರ ಕೋವಿಡ್ 2ನೇ ಅಲೆ ಎದುರಿಸಲು ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ. ಕೇಂದ್ರ – ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಲಕ್ಷ್ಯ ಜನಸಾಮಾನ್ಯರನ್ನು ಬಲಿಪಡೆಯುತ್ತಿದೆ. ಜನರ ಜೀವ ಉಳಿಸಲು ಈ ಸರ್ಕಾರಗಳು ಇದ್ದ ಯಾವ ಅವಕಾಶಗಳನ್ನೂ ಉಪಯೋಗಿಸಿಕೊಳ್ಳಲಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಕೊರೋನಾ ಟೆಸ್ಟಿಂಗ್‌ನಲ್ಲಿನ ವ್ಯಾಪಕ ಭ್ರಷ್ಟಾಚಾರದಲ್ಲಿ ಮತ್ರಿಗಳಿಗೆಷ್ಟು ಪಾಲು? ಅಧಿಕಾರಿಗಳಿಗೆ ಎಷ್ಟು ಪಾಲು? ನಿಮಗೆಷ್ಟು ಪಾಲು ಸಚಿವ ಸುಧಾಕರ್ ಅವರೇ? ಸಚಿವರ ಹೆಸರಲ್ಲೂ ರಿಪೋರ್ಟ್, ಪಾಸಿಟಿವ್ ಬೇಕಿದ್ರೆ ಪಾಸಿಟಿವ್, ನೆಗೆಟಿವ್ ಬೇಕಿದ್ರೆ ನೆಗೆಟಿವ್, ಹಣ ಕೊಟ್ಟರೆ ಬೇಕಾದಂತ ರಿಪೋರ್ಟ್. ಅಧಿಕಾರಿಗಳೊಂದಿಗೆ ಸರ್ಕಾರ ಸೇರಿಕೊಂಡು ಕೊರೋನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ಸರ್ಕಾರವೇ ಸೋಂಕು ತಗುಲಿ ಸೋಂಕಿತ ಸರ್ಕಾರ ಆಗಿರುವಾಗ ಜನತೆಯ ಸೋಂಕು ದೂರಾಗಲು ಸಾಧ್ಯವೇ ಎಂದು ಕಿಡಿಕಾರಿದೆ.
ಬೆಡ್, ಚಿಕಿತ್ಸೆ ಸಿಗದೆ ಸೋಂಕಿತರು ಹಾದಿ ಬೀದಿಗಳಲ್ಲಿ ನರಳುತ್ತಿದ್ದಾರೆ. ಸಮುದಾಯ ಭವನಗಳು, ಕಲ್ಯಾಣ ಮಂಟಪಗಳನ್ನು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಾಡಿಗೆ ಪಡೆದು ಸೋಂಕಿನ ತೀವ್ರತೆ ಕಡಿಮೆ ಇರುವವರಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಬಹುದಿತ್ತು, ಏಕಿನ್ನೂ ಮಾಡಿಲ್ಲ? ಪಿಎಂ ಕೇರ್ಸ್‌ನಲ್ಲಿ ರಾಜ್ಯಕ್ಕೆ ಹೆಚ್ಚಿನ ವೆಂಟಿಲೇಟರ್‌ಗಳಿಗೆ ಏಕೆ ಬೇಡಿಕೆ ಇಟ್ಟಿಲ್ಲ? ಕಳೆದ ನವೆಂಬರ್‌ನಲ್ಲಿಯೇ ತಜ್ಞರು ಎಚ್ಚರಿಕೆ ನೀಡಿದ್ದಾಗ್ಯೂ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ? ಎಂದು ಪ್ರಶ್ನಿಸಿದೆ.
ರಾಜ್ಯ ಸರ್ಕಾರ ಅಘೋಷಿತ ಲಾಕ್‌ಡೌನ್ ಜಾರಿಗೊಳಿಸಿದೆ. ಬಡವರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲಾ ಅರ್ಹರಿಗೆ ಕೂಡಲೇ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು. ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಉದ್ಯಮ, ಕೈಗಾರಿಕೆಗಳ ನೆರವಿಗೆ ಅಗತ್ಯ ಕ್ರಮ ಕೈಗೊಂಡು ಉದ್ಯೋಗ ಹಾಗೂ ಆರ್ಥಿಕ ನಷ್ಟವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದೆ.