ಬೀದರ್: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಆರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ಬಸ್ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಬೀದರ್ ಜಿಲ್ಲೆ ಹುಮ್ನಾಬಾದ್ ನಲ್ಲಿ ಮಾತನಾಡಿದ ಸಚಿವ ಸವದಿ, ಸಾರಿಗೆ ನೌಕರರ ಸಂಬಳ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ. ಯಾರದೋ ಮಾತು ಕೇಳಿ ಪ್ರತಿಭಟನೆ ನಡೆಸುವುದರಿಂದ ತೊಂದರೆಯಾಗುವುದು ನಿಮಗೆ ಹಾಗೂ ನಿಮ್ಮ ಕುಟುಂಬಗಳಿಗೆ. ಇದನ್ನು ಅರಿತು ಮುಷ್ಕರ ವಾಪಸ್ ಪಡೆಯಿರಿ ಎಂದಿದ್ದಾರೆ.
ಮುಷ್ಕರ ನಿರತ ಸಾರಿಗೆ ನೌಕರರಿಗೆ ಬಿಗ್ ಶಾಕ್: ವೇತನಕ್ಕೆ ತಡೆ..? ಮುಷ್ಕರ ಮುಂದುವರೆದ್ರೆ ನಷ್ಟ, ವೇತನ ಕೊಡಲೂ ಕಷ್ಟ: ಲಕ್ಷ್ಮಣ ಸವದಿ
ಸರ್ಕಾರ ಸಂಬಳ ಹೆಚ್ಚಿಸಲು ಸಿದ್ಧವಿದ್ದರೂ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ಎಷ್ಟು ದಿನ ಪ್ರತಿಭಟನೆಗಳನ್ನು ಮಾಡುತ್ತಾರೆ ಅಷ್ಟು ದಿನವೂ ನೌಕರರಿಗೆ ನಷ್ಟವಾಗಲಿದೆ. ಇದರಿಂದ ಇಲಾಖೆಗೂ ತೊಂದರೆ. ಕೆಲಸಕ್ಕೆ ಹಾಜರಾಗದವರಿಗೆ ವೇತನ ನೀಡಲು ಸಾಧ್ಯವೇ ಇಲ್ಲ. ಹಠಮಾರಿ ಧೋರಣೆ ಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಹೇಳಿದ್ದಾರೆ.