ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠ, ಕೃಷಿ ಕಾಯ್ದೆ ಕುರಿತು ಕೇಂದ್ರ ಹಾಗೂ ರೈತ ಮುಖಂಡರ ನಡುವಿನ ಮಾತುಕತೆಗೆ ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿ ರಚನೆಗೆ ಸೂಚನೆ ನೀಡಿದ್ದು, ಮುಂದಿನ ಆದೇಶದ ವರೆಗೂ ಕೃಷಿ ಕಾಯ್ದೆ ಜಾರಿಗೆ ತಡೆ ನೀಡಿ ಆದೇಶ ಹೊರಡಿಸಿದೆ.
ಕೃಷಿ ಕಾಯ್ದೆ ವಿರೋಧಿಸಿ ಕಳೆದ 48 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ರೈತರ ಜೊತೆ ನಡೆಸಿದ ಹಲವು ಸಭೆಗಳು ವಿಫಲವಾಗಿವೆ. ಇದರ ಬೆನ್ನಲ್ಲೇ ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನಿನ್ನೆಯಷ್ಟೆ ಕಾಯ್ದೆ ಜಾರಿಗೆ ತಡೆ ನೀಡುವಂತೆ ಸೂಚಿಸಿತ್ತು. ಅಲ್ಲದೇ ರೈತರ ಪ್ರತಿಭಟನೆ ನಿಭಾಯಿಸಿದ ರೀತಿಗೂ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.