ಕಲಬುರಗಿ: ರಾಜ್ಯದ ಹಲವು ಜಿಲ್ಲೆಗಳ ಜನರು ಪ್ರವಾಹದಿಂದಾಗಿ ನಲುಗಿ ಹೋಗಿದ್ದಾರೆ. ಮನೆ, ಮಠ, ಬೆಳೆ ಕಳೆದುಕೊಂಡು ಊಟಕ್ಕಾಗಿ ಪರದಾಡುತ್ತಿದ್ದಾರೆ. ಜನರ ಸಂಕಷ್ಟದ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಪ್ರಚಾರಕ್ಕಾಗಿ ಹೇಗೆಲ್ಲ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
ಭಾರೀ ಮಳೆ, ಭೀಮಾ ನದಿ ಪ್ರವಾಹದಿಂದಾಗಿ ಕಲಬುರಗಿಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನ-ಜಾನುವಾರಗಳು ಪ್ರವಾಹದಲ್ಲಿ ಬದುಕು ಕಳೆದುಕೊಂಡಿದ್ದಾರೆ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯ ನೆಲೋಗಿ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಣ್ಣ ಪ್ರವಾಹದಲ್ಲಿ ಸಿಲುಕಿರುವ ಕುರಿ ಮರಿಗಳನ್ನು ರಕ್ಷಣೆ ಮಾಡುವುದಾಗಿ ಹೇಳಿ ಪ್ರಚಾರಕ್ಕಾಗಿ ನಾಟಕವಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ತಾನು ಕುರಿಗಳನ್ನು ರಕ್ಷಣೆ ಮಾಡುತ್ತಿರುವ ಬಗ್ಗೆ ವಿಡಿಯೋ ಮಾಡುವಂತೆ ಹೇಳಿ, ಸಿನಿಮಾ ಹೀರೋ ರೀತಿಯಲ್ಲಿ ಓಡಿ ಬಂದು ಪ್ರವಾಹದಲ್ಲಿ ಸಿಲುಕಿರುವ ಕುರಿಗಳನ್ನು ರಕ್ಷಿಸಿದ್ದೇನೆ ಎಂಬ ರೀತಿಯಲ್ಲಿ ಬಿಂಬಿತವಾಗುವಂತೆ ವಿಡಿಯೋ ಮಾಡಿಸಿದ್ದಾರೆ. ಅಲ್ಲದೇ ಪಿಎಸ್ಐ ಮಲ್ಲಣ್ಣ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಕುರಿಗಳನ್ನು ರಕ್ಷಿಸಿದ್ದಾರೆ ಎಂದು ಹೇಳುವಂತೆ ಗ್ರಾಮಸ್ಥರಿಂದಲೂ ಹೇಳಿಸಿದ್ದಾರೆ. ಅಲ್ಲದೇ ಗ್ರಾಮಸ್ಥರ ಜೊತೆ ಪ್ರವಾಹದ ನಡುವೆ ಕುರುಗಳನ್ನು ಹಿಡಿದುಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಪ್ರವಾಹದಲ್ಲಿ ಸಿಲುಕಿ ಜನರ ಬದುಕು ಮೂರಾಬಟ್ಟೆಯಾಗಿರುವ ಈ ವೇಳೆ ಪ್ರಚಾರಕ್ಕಾಗಿ ಪಿಎಸ್ಐ ಮಾಡಿರುವ ನಾಟಕ ನೋಡಿ, ರಾಜ್ಯಾದ್ಯಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.