ಕೊರೊನಾದಿಂದ ಹೆಚ್ಚು ನಷ್ಟ ಅನುಭವಿಸಿದ ಉದ್ಯಮಗಳಲ್ಲಿ ಸಾರಿಗೆ ಕೂಡ ಒಂದು. ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಮೊದಲು ನಿಲ್ಲಿಸಿದ್ದು, ಟ್ರೈನ್ ಹಾಗೂ ಬಸ್‌ಗಳನ್ನು. ಹೆಚ್ಚು ನಷ್ಟವಾಗಿದ್ದು ಸಾರಿಗೆಗೆ. ಈ ನಷ್ಟ ಸರಿದೂಗಿಸೋದಿಕ್ಕೆ ಇನ್ನೂ ಸಾಧ್ಯವಾಗುತ್ತಿಲ್ಲ. ನಷ್ಟದ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಇತ್ತ ನೌಕರರಿಗೆ ಸಂಬಳ ಕೊಡೋದಿಕ್ಕೂ ಸಾಧ್ಯವಾಗದ ಸ್ಥಿತಿ ತಲುಪಿದಂತಾಗಿದೆ.
ಈ ಮಧ್ಯೆ ಟಿಕೆಟ್ ದರ ಹೆಚ್ಚಳ ಮಾಡೋದ್ರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಂದು ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯ್ತು. ಸಭೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಟಿಕೆಟ್ ದರ ಏರಿಕೆ ಬಗ್ಗೆ ಚರ್ಚೆಯಾಗಿದೆ ಎನ್ನಲಾಗುತ್ತಿದೆ.
ಟಿಕೆಟ್ ದರ ಏರಿಕೆ ಮಾಡಿದರೆ ನಷ್ಟವನ್ನು ಸರಿದೂಗಿಸಬಹುದು ಎಂಬ ಉದ್ದೇಶದಿಂದ ಈ ಚಿಂತನೆ ನಡೆದಿದೆ. ಇನ್ನು ನಿಗಮಗಳಿಂದ ಶೇ.18ರಷ್ಟು ಟಿಕೆಟ್ ದರ ಏರಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರೊನಾ ಸಂಕಷ್ಟದ ನಡುವೆ ಟಿಕೆಟ್ ದರ ಏರಿಕೆ ಮಾಡಿದರೆ ಹೇಗೆ ಎಂಬ ಪ್ರಶ್ನೆಯೂ ಸರ್ಕಾರದ ಮುಂದಿರೋದ್ರಿಂದ ಈ ಬಗ್ಗೆ ಸಿಎಂ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು.