ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಈಗಾಗಲೇ ಶಾಸಕ ಜಮೀರ್ ಅಹ್ಮದ್ ಅವರಿಗೆ ಆತಂಕ ಆರಂಭವಾದಂತಿದೆ. ಇದರ ಬೆನ್ನಲ್ಲೇ ಶಾಸಕರ ಆಪ್ತ ಮುಜಾಹಿದ್ ಸಿಸಿಬಿ ಕಚೇರಿ ಬಳಿ ಪ್ರತ್ಯಕ್ಷರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರಕರಣ ಸಂಬಂಧ ಈಗಾಗಲೇ ಶಾಸಕ ಜಮೀರ್ ಆಪ್ತ ಫಾಝಿಲ್ ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸಿನಿ ವಿತರಕ ಪ್ರಶಾಂತ್ ಸಂಬರಗಿ ಅವರ ವಿಚಾರಣೆ ಕೂಡ ಸಿಸಿಬಿಯಿಂದ ಆರಂಭವಾಗಿದೆ. ಈ ನಡುವೆ ಜಮೀರ್ ಅಹ್ಮದ್ ಅವರ ಇನ್ನೋರ್ವ ಆಪ್ತ ಮುಜಾಹಿದ್ ಏಕಾಏಕಿ ಸಿಸಿಬಿ ಕಚೇರಿ ಬಳಿ ಪ್ರತ್ಯಕ್ಷರಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಸಿಸಿಬಿ ಕಚೇರಿಗೆ ಆಗಮಿಸಿರುವ ಬಗ್ಗೆ ಮಾತನಾಡಿರುವ ಮುಜಾಹಿದ್, ತಾನು ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರಲ್ಲಿ ಇರುವುದಿಲ್ಲ. ಅಜ್ಮೀರ್ ಗೆ ಹೋಗುತ್ತಿದ್ದೇನೆ. ಇದನ್ನು ಸಿಸಿಬಿಗೆ ತಿಳಿಸಲು ಬಂದಿದ್ದೇನೆ ಎಂದಿದ್ದಾರೆ.
ಅಲ್ಲದೇ ಪ್ರಕರಣದ ಬಗ್ಗೆ ನನಗೆ ಸಿಸಿಬಿಯಿಂದ ಯಾವುದೇ ನೋಟೀಸ್ ಬಂದಿಲ್ಲ. ಆದರೂ ತಾನಾಗೇ ಕಚೇರಿಗೆ ಬಂದಿದ್ದು, ಮಾಹಿತಿ ಪಡೆದು ಹೋಗುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಹಲವು ರಾಜಕೀಯ ನಾಯಕರು, ಉದ್ಯಮಿಗಳೂ ಇದರಲ್ಲಿ ಭಾಗಿಯಾಗಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ.