ಬೆಂಗಳೂರು: ಶಿರಾ ಹಾಗೂ ಆರ್.ಆರ್.ನಗರ ಉಪಚುನಾವಣೆಗೆ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆರ್.ಆರ್.ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ಅವರಿಗೆ ಇದೀಗ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದ್ದು, ಬೆಂಬಲಿಗರ ಜೊತೆ ಸಭೆ ನಡೆಸಿದ್ದಾರೆ.
ಆರ್. ಆರ್. ನಗರ ಬಿಜೆಪಿ ಟಿಕೆಟ್ ಗಾಗಿ ತುಳಸಿ ಮುನಿರಾಜು ಹಾಗೂ ಮುನಿರತ್ನ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇಬ್ಬರ ಪರವಾಗಿ ರಾಜ್ಯದ ನಾಯಕರು ಹೈಕಮಾಂಡ್ ಬಳಿ ಲಾಬಿಯನ್ನೂ ನಡೆಸಿದ್ದಾರೆ. ಆದರೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಟಿಕೆಟ್ ಘೋಷಣೆಗೆ ವರಿಷ್ಠರು ವಿಳಂಬ ಮಾಡುತ್ತಿರುವುದನ್ನು ಗಮನಿಸಿರುವ ಮುನಿರತ್ನ, ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕದಲ್ಲಿದ್ದು, ಮಾಜಿ ಕಾರ್ಪೊರೇಟರ್ ಗಳು ಹಾಗೂ ಬೆಂಬಲಿಗರ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಒಂದು ವೇಳೆ ಆರ್.ಆರ್.ನಗರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಉಪಚುನಾವಣೆಗೆ ನಿಲ್ಲುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.