ಇತ್ತೀಚೆಗಷ್ಟೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನ ರಮೇಶ್ ಜಾರಕಿಹೊಳಿ ಕಿಚಾಯಿಸಿದ್ದರು. ಬೆಳಗಾವಿ ಗ್ರಾಮೀಣ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಹೆಬ್ಬಾಳ್ಕರ್ ನೀಡಿದ್ದ ಕುಕ್ಕರ್ ಇನ್ನೂ ಚೆನ್ನಾಗಿದೆಯಾ. ಕುಕ್ಕರ್ ಹಂಚಿದ್ದು ನನ್ನ ದುಡ್ಡಿನಿಂದ ಎಂದು ಹೇಳುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಟೀಕೆ ಮಾಡಿದ್ದರು.
ಈ ವಿಚಾರವಾಗಿ ಇದೀಗ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ. ನಾನು ಕಿತ್ತೂರು ರಾಣಿಯ ವಂಶಸ್ಥೆ. ನಾನು ರಾಜಕಾರಣದಲ್ಲಿಯೇ ಜನರ ಸೇವೆಗೆ ಮುಂದಾಗುವವಳು. ನನ್ನದು ಹೋರಾಟದ ರಾಜಕಾರಣ. ಇಂತಹ ಬೆದರಿಕೆಗಳಿಗೆಲ್ಲ ನಾನು ಜಗ್ಗುವುದಿಲ್ಲ. ನನ್ನ ಜನತೆಗಾಗಿ ನಾನು ಹೋರಾಡುತ್ತೇನೆ. ರಮೇಶ್ ಜಾರಕಿಹೊಳಿ ತಮ್ಮ ಮದ, ಗರ್ವ, ಜಂಬ, ಅಹಂಕಾರ ಬಿಟ್ಟು ಕ್ಷೇತ್ರದ ಜನತೆ ಪರ ಇದ್ದು, ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದಿದ್ದಾರೆ.
ಇನ್ನು ನಾವು ನಮ್ಮ ಹರ್ಷ ಶುಗರ್ಸ್ ಆರಂಭೋತ್ಸವದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಅಧಿಕೃತವಾಗಿಯೇ ಕುಕ್ಕರ್ ವಿತರಿಸಿದ್ದೇವೆ. ಇದಕ್ಕೆ ನಮ್ಮ ಬಳಿ ಲೆಕ್ಕ ಇದೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿಯ ಈ ಹೇಳಿಕೆ ಸಂಬಂಧ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಹಾಗೂ ಚುನಾವಣೆ ಆಯೋಗಕ್ಕೂ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.