ಕುಂಭದ್ರೋಣ ಮಳೆಗೆ ಕರುನಾಡ ಜನತೆ ತತ್ತರಿಸಿ ಹೋಗಿದ್ದಾರೆ. ಕೆಲವು ದಿನಗಳಿಂದ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ‘ಧೋ’ ಎಂದು ಧಾರಾಕಾರ ಮಳೆ ಸುರಿಯುತ್ತಿದ್ದು, ಜಲ ಪ್ರಳಯ ಎದುರಾಗುವ ಆತಂಕ ಮನೆಮಾಡಿದೆ.
ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು, ಕೆರೆ, ನದಿಗಳು ತುಂಬಿ ಹರಿಯುತ್ತಿವೆ.
ರೈತರ ಬೆಳೆ, ನೀರು ಪಾಲಾಗಿದ್ದು, ಮೊದಲೇ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿದ್ದವರು ಈಗ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಕೆಲವೊಂದು ಊರುಗಳು ದ್ವೀಪಗಳಂತಾಗಿದ್ದು, ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
ಕೊರೊನಾದಿಂದಾಗಿ ರಾಜ್ಯದ ಜನತೆ ಈಗಾಗಲೇ ತತ್ತರಿಸಿಹೋಗಿದ್ದು, ಇದರ ನಡುವೆ ಸುರಿಯುತ್ತಿರುವ ಮಳೆ ಮತ್ತಷ್ಟು ಆತಂಕ ತಂದೊಡ್ಡಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಹೀಗಾಗಿ ಮತ್ತೆ ರಾಜ್ಯದಲ್ಲಿ ಜಲಪ್ರಳಯ ಉಂಟಾಗಲಿದೆಯಾ ಎಂಬ ಭೀತಿ ಎದುರಾಗಿದೆ.