ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಕಿರುತೆರೆ ಕಲಾವಿದರಿಗೂ ನಶೆಯ ನಂಟಿದೆ ಎಂಬುದು ಗೊತ್ತಾಗಿದೆ. ಕನ್ನಡದ ಖ್ಯಾತ ಕಿರುತೆರೆ ಕಲಾವಿದರಿಗೆ ಯಾರು ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎಂಬ ಮಾಹಿತಿ ಕೂಡ ಈಗ ಬಹಿರಂಗವಾಗಿದೆ ಎನ್ನಲಾಗಿದೆ.
ಇನ್ಸ್ ಪೆಕ್ಟರ್ ಬಾಲರಾಜು ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಸೆ.12 ರಂದು ನಡೆದ ದಾಳಿಯಲ್ಲಿ ಕೇರಳ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿತ್ತು. ಡ್ರಗ್ಸ್ ಪೆಡ್ಲರ್ ಗಳಾದ ಡ್ಯಾನಿಯಲ್ ಹಾಗೂ ಗೋಕುಲ್ ಕೃಷ್ಣ ಎಂಬುವವರನ್ನು ಪೀಣ್ಯದ ಅಂದ್ರಹಳ್ಳಿಯಲ್ಲಿ ಬಂಧಿಸಲಾಗಿತ್ತು.
ಈ ಡ್ರಗ್ಸ್ ಪೆಡ್ಲರ್ ಗಳು ವಿಚಾರಣೆ ವೇಳೆ ಕನ್ನಡ ಕಿರುತೆರೆ ಕಲಾವಿದರಿಗೆ ತಾವು ಡ್ರಗ್ಸ್ ಪೂರೈಸುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ. ಕೇರಳದಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದುದಾಗಿಯೂ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಕಿರುತೆರೆಯ ಹಲವು ಕಲಾವಿದರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು.
ನೋಟಿಸ್ ಬೆನ್ನಲ್ಲೇ ಈಗಾಗಲೇ ಕಿರುತೆರೆ ನಟಿ ರಶ್ಮಿತಾ ಚಂಗಪ್ಪ ಹಾಗೂ ಕ್ರಿಕೆಟಿಗ ಅಯ್ಯಪ್ಪ ಅವರು ವಿಚಾರಣೆಗೆ ಹಾಜರಾಗಿದ್ದರು. ಇದೀಗ ನಟಿ ಗೀತಾ ಭಾರತಿ ಭಟ್ ಹಾಗೂ ನಟ ಅಭಿಷೇಕ್ ದಾಸ್ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ.