ಬೆಂಗಳೂರು: ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯರ ಅಪಹರಣ ಪ್ರಕರಣ ವಿಚಾರವಾಗಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕಿಡ್ನ್ಯಾಪ್ ಮಾಡುವುದು, ಮತ್ತೆ ವಾಪಸ್ ಬರುವುದು ಇದೆಲ್ಲ ದೊಡ್ಡ ವಿಷಯವಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜಕೀಯದಲ್ಲಿ ಕಿಡ್ನ್ಯಾಪ್ ಮಾಡುವುದು, ನಂತರ ಮತ್ತೆ ವಾಪಸ್ ಕರೆ ತರುವುದು ಇದೆಲ್ಲ ಸಹಜ. ನಗರಸಭೆ ಸದಸ್ಯರ ಅಪಹರಣದಲ್ಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಆರೋಪ ಕೇಳಿಬಂದಿದೆ. ಆದರೆ ಆರೋಪ ಸಾಬೀತಾಗಬೇಕಲ್ಲ ಎಂದು ಹೇಳಿದ್ದಾರೆ.
ನ.2ರಂದು ಗಂಗಾವತಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಈ ನಡುವೆ ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಹಿರೇಮಠ ಅವರನ್ನು ಅಪಹರಿಸಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.