ಬೆಂಗಳೂರು: ಅಪಹರಣ ಪ್ರಕರಣದ ಬಗ್ಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ವತಃ ಮಾಹಿತಿ ನೀಡಿದ್ದು, ನವೆಂಬರ್ 25ರಂದು ಸಂಜೆ ಕಾರಿನ ಗಾಜು ಒಡೆದು ನನಗೆ ಮಂಕಿ ಕ್ಯಾಪ್ ಹಾಕಿ ಕಿಡ್ನಾಪ್ ಮಾಡಿ ಕರೆದೊಯ್ದಿದ್ದರು ಎಂದು ಹೇಳಿದ್ದಾರೆ.
ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪ್ರಕಾಶ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ತಮಗೆ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರು ಪ್ರಕಾಶ್, ದುಷ್ಕರ್ಮಿಗಳು ಕೋಲಾರದಲ್ಲಿ ನನ್ನ ಕಾರಿನ ಗಾಜು ಒಡೆದು ನನ್ನನ್ನು ಅಪಹರಣ ಮಾಡಿದ್ದರು. ಮಂಕಿ ಕ್ಯಾಪ್ ಹಾಕಿ ಕಾಡಿಗೆ ಹೊತ್ತೊಯ್ದು ಚಿತ್ರಹಿಂಸೆ ನೀಡಿದ್ದಾರೆ. 30 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ನನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ ಥಳಿಸಿದ್ದಾರೆ. ಅಂತಿಮವಾಗಿ 50 ಲಕ್ಷ ರೂ. ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ. 50 ಲಕ್ಷ ರೂ. ತರುವಂತೆ ಸ್ನೇಹಿತನಿಗೆ ಕರೆ ಮಾಡಿ ಹೇಳಿದ್ದೆ ಎಂದರು.
ಕಾಡಿನಲ್ಲಿ ಚಿತ್ರಹಿಂಸೆ ನೀಡಿ, ಅಲ್ಲಿಂದ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಎಲ್ಲಿಗೆ ಎಂಬುದು ನನಗೆ ಗೊತ್ತಾಗಿಲ್ಲ. ನನ್ನ ಕೈಕಾಲು ಕಟ್ಟಿಹಾಕಿ ಹೊಡೆದಿದ್ದಾರೆ. ಬೇರೆಯವರು ಕರೆ ಮಾಡಿದಾಗ ರಿಸೀವ್ ಮಾಡಿ ನಾರ್ಮಲ್ ಆಗಿ ಮಾತನಾಡುವಂತೆ ಬೆದರಿಸುತ್ತಿದ್ದರು. ಬಳಿಕ ನನ್ನನ್ನು ಹೊಸಕೋಟೆ ಬಳಿ ಬಿಟ್ಟುಹೋಗಿದ್ದಾರೆ. ಮಗನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದೆ. ನನ್ನ ಹೆದರಿಸಿದ್ದಕ್ಕೆ ದೂರು ನೀಡಲು ಹೋಗಿಲ್ಲ. ಕಾರು ಪತ್ತೆಯಾದ ಬಳಿಕ ದೂರು ನೀಡಬೇಕಾಯ್ತು ಎಂದು ತಿಳಿಸಿದ್ದಾರೆ.