
ಬೆಂಗಳೂರು: ಫೈನಾನ್ಶಿಯರ್ ಕಿಡ್ನಾಪ್ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಹೆಸರು ಕೇಳಿಬಂದಿದ್ದು, ಇದೀಗ ಸುನಾಮಿ ಕಿಟ್ಟಿಯನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.
ಫೈನಾನ್ಶಿಯರ್ ನವೀನ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಆರೋಪಿಗಳನ್ನು ನಾಗಮಂಗಲ ಪೊಲೀಸರು ಬಂಧಿಸಿದ್ದು, ಪ್ರಕರಣದ ಹಿಂದೆ ಸುನಾಮಿ ಕಿಟ್ಟಿ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.
ಬಂಧಿತ ಆರೋಪಿಗಳಾದ ಮೋಹನ್, ಮಹೇಶ್, ನವ್ಯಂತ್, ಜೋಸೆಫ್, ಭರತ್, ರಾಜು ಹಾಗೂ ರವಿಕಿರಣ್ ಎಂಬುವವರು ಸುನಾಮಿ ಕಿಟ್ಟಿ ಹೆಸರನ್ನು ಬಾಯ್ಬಿಟ್ಟಿದ್ದು, ಫೈನಾನ್ಶಿಯರ್ ನವೀನ್ ನಿಂದ ಸುನಾಮಿ ಕಿಟ್ಟಿ ಹಣ ಪಡೆದಿದ್ದು, ಇದೇ ವಿಚಾರಕ್ಕೆ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಅಪಹರಣ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ಕೂಡ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಸುನಾಮಿ ಕಿಟ್ಟಿಯನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.