ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡು ಇಕೋ ಬೀಚ್ ಕಡಲ ತೀರಕ್ಕೆ ಇದೀಗ ಅಂತರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಮಾನ್ಯತೆ ಲಭ್ಯವಾಗಿದೆ. ಈ ಮೂಲಕ ವಿಶ್ವದ ಅತ್ಯಂತ ಸ್ವಚ್ಛ ಕಡಲ ತೀರಗಳ ಸಾಲಿಗೆ ಕಾಸರಕೋಡು ಬೀಚ್ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ.
ಡೆನ್ಮಾರ್ಕ್ ನಲ್ಲಿರುವ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್ ಸಂಸ್ಥೆಯು ಪರಿಸರ ಶಿಕ್ಷಣ ಮತ್ತು ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ ಮತ್ತು ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ನಾಲ್ಕು ಭಾಗಗಳಲಿ 33 ಮಾನದಂಡಗಳನ್ನು ಇಟ್ಟುಕೊಂಡು ಬ್ಲೂ ಫ್ಲಾಗ್ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆಯನ್ನು ನೀಡುತ್ತದೆ.
ಇದೀಗ ಕಾಸರಕೋಡಿನ ಇಕೋ ಬೀಚ್ ಗೆ ಈ ಮಾನ್ಯತೆ ಸಿಕ್ಕಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಭಾರತದ 8 ಕಡಲ ತೀರಗಳನ್ನು ಬ್ಲೂ ಫ್ಲಾಗ್ ಅಂತರಾಷ್ಟ್ರೀಯ ಮಾನ್ಯತೆಗೆ ಶಿಫಾರಸು ಮಾಡಿತ್ತು.