ತುಮಕೂರು: ಆರ್.ಆರ್.ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ. ಕಾಂಗ್ರೆಸ್ ನಾಯಕರ ಒಳ ಜಗಳವೇ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಆರ್.ಆರ್.ನಗರಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ್ದರು. ಶಿರಾದಲ್ಲಿ ಸಿದ್ದರಾಮಯ್ಯ ಉಸ್ತುವಾರಿ ವಹಿಸಿದ್ದರು. ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಬಗ್ಗೆ ಡಿಕೆಶಿ ತಲೆಬಿಸಿ ಮಾಡಿಕೊಂಡಿದ್ದರೆ, ಆರ್.ಆರ್.ನಗರದಲ್ಲಿ ಕೈ ಅಭ್ಯರ್ಥಿ ಸೋಲಿಸಲು ಸಿದ್ದರಾಮಯ್ಯ ತಲೆಕೆಡಿಸಿಕೊಂಡಿದ್ದರು. ಇದೀಗ ಕಾಂಗ್ರೆಸ್ ಆಂತರಿಕ ಜಗಳ ಬೀದಿ ಜಗಳವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲನುಭವಿಸಲಿದೆ ಎಂದರು.
ಆರ್.ಆರ್.ನಗರದಲ್ಲಿ ಬಿಜೆಪಿ 40 ಸಾವಿರ ಮತಗಳ ಅಂತರದಿಂದ ಗೆದ್ದರೆ, ಶಿರಾದಲ್ಲಿ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ನಾಯಕತ್ವಕ್ಕೆ ಕಾಂಗ್ರೆಸ್ ನಲ್ಲಿ ಬೆಲೆಯಿಲ್ಲದಂತಾಗಿದೆ. ಅವರಿಗೆ ತಾನು ಮೂಲೆಗುಂಪಾಗುವ ಭೀತಿ ಎದುರಾಗಿದೆ. ಹಾಗಾಗಿ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.