ಬೆಂಗಳೂರು: ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯಿದೆ ತಿದ್ದುಪಡಿ ಖಂಡಿಸಿ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ರೈತ ಸಂಘಟನೆಗಳ ಪ್ರತಿಭಟನೆಗೆ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಜನಶಕ್ತಿ ಸಂಘ, ಹಸಿರು ಸೇನೆ, ದಲಿತ ಸಂಘಟನೆಗಳು, ಕರವೇ, ಬೀದಿಬದಿ ವ್ಯಾಪಾರಿಗಳ ಸಂಘಟನೆ ಸೇರಿದಂತೆ 33ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ರೈತರ ಜೊತೆ ಸೇರಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ವಿವಿಧೆಡೆ ಬೈಕ್ ರ್ಯಾಲಿ, ರಸ್ತೆಗಳಲ್ಲಿ ಉರುಳುಸೇವೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಂಗಳೂರಿನ ಟೌನ್ ಹಾಲ್, ಮೈಸೂರು ಬ್ಯಾಂಕ್ ವೃತ್ತಗಳಲ್ಲಿ ತಂಡೋಪತಂಡವಾಗಿ ಬಂದು ಕರವೇ ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಟೌನ್ ಹಾಲ್ ಮುಂಭಾಗ ಪ್ರತಿಭಟನಾಕಾರರು ರಸ್ತೆಗಳಲ್ಲಿ ಉರುಳುಸೇವೆ ನಡೆಸಿ ಸರ್ಕಾರದ ಧೋರಣೆ ಖಂಡಿಸಿದ್ದಾರೆ. ಬೆಂಗಳೂರಿನ ಹಲವೆಡೆಗಳಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ.