ಬೆಳಗಾವಿ: ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರವಿದ್ದು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವಿದೆ. ಹೀಗಾಗಿ ಕರ್ನಾಟಕದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಕರ್ನಾಟಕದ ಅಭಿವೃದ್ಧಿಗಾಗಿ ಅವರ ಕೊಡುಗೆಯೇನು ಎಂಬುದನ್ನು ಲೆಕ್ಕ ನೀಡಲಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
2014 ಹಾಗೂ 2019ರಲ್ಲಿ ನಮಗೆ ಅಭೂತಪೂರ್ವ ಗೆಲುವು ನೀಡಿದ್ದೀರಿ. ಮತಗಳ ಮೂಲಕ ಪ್ರಧಾನಿ ಮೋದಿ ಜೋಳಿಗೆ ತುಂಬಿದ್ದೀರಿ. ಕೇಂದ್ರ ಬಿಜೆಪಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದುಹಾಕಿದೆ. ನೆಹರು ಕಾಲದಿಂದ ಡಾ.ಸಿಂಗ್ ವರೆಗೂ ಇದು ಸಾಧ್ಯವಾಗಿರಲಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಇದು ಸಾಧ್ಯವಾಯಿತು. ಅಯೋದ್ಯೆಯಲ್ಲಿ ರಾಮ ಮಂದಿರ ಕನಸು ನನಸಾಗಿದೆ. ರಾಮ ಮಂದಿರಕ್ಕೆ ಮೋದಿ ಶಿಲನ್ಯಾಸ ನೆರವೇರಿಸಿದ್ದಾರೆ. ತ್ರಿವಳಿ ತಲಾಕ್ ನ್ನು ಕಿತ್ತೆಸೆಯಲಾಗಿದೆ. ಪಾಕ್ ಗೆ ಎರಡು ಬಾರಿ ತಕ್ಕ ಉತ್ತರ ನೀಡಲಾಗಿದೆ. ಏರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ಮೂಲಕ ಪ್ರತ್ಯುತ್ತರ ಕೊಟ್ಟಿದ್ದೇವೆ. ಇದರಿಂದ ಪಾಕಿಸ್ತಾನದ ಪ್ರಚೋದಿತ ಭಯೋತ್ಪಾದನೆ ನಿಂತಿದೆ. ಇದಕ್ಕೂ ಕಾಂಗ್ರೆಸ್ ನವರು ವಿರೋಧ ವ್ಯಕ್ತಪಡಿಸಿದರು ಎಂದು ಹೇಳಿದರು.
ಆರ್ಥಿಕತೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ 1 ಆಗುತ್ತಿದೆ. 5 ಟ್ರಿಲಿಯನ್ ಆರ್ಥಿಕತೆಯತ್ತ ಮುನ್ನಡೆಯುತ್ತಿದ್ದೇವೆ. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ 5 ಲಕ್ಷದವರೆಗೆ ವಿಮೆ ನೀಡಲಾಗುತ್ತಿದೆ. ಪ್ರತಿ ಮನೆಗೂ ಬ್ಯಾಂಕ್ ಖಾತೆ ನೀಡಲಾಗಿದೆ. ಮೋದಿ ಸರ್ಕಾರ ಬಂದ ಬಳಿಕ ಪ್ರತಿ ಮನೆಗೂ ಗ್ಯಾಸ್ ಸಿಲಿಂಡರ್ ಒದಗಿಸಲಾಗಿದೆ ಎಂದು ಪ್ರಧಾನಿ ಮೋದಿ ನೇತೃತ್ವದ ಸಾಧನೆಯನ್ನು ವಿವರಿಸಿದರು.