ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಲೆನಾಡಿನ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರೀ ಮಳೆಯಿಂದಾಗಿ ಇಂದ್ರಾಣಿ ನದಿ ತುಂಬಿ ಹರಿದ ಪರಿಣಾಮ ಉಡುಪಿಯ ಕಲ್ಸಂಕ ಬೈಲಕೆರೆ ಪ್ರದೇಶ ನಡುಗಡ್ಡೆಗಳಂತಾಗಿದ್ದು, ಎರಡು ದಿನಗಳಿಂದ ಈ ಭಾಗದಲ್ಲಿ ಜನರು ಮನೆಯಿಂದ ಹೊರಬರಲಾಗದೇ ಪರದಾಡುತ್ತಿದ್ದರು. ನದಿ ಪ್ರವಾಹ ಹೆಚ್ಚುವ ಅಪಾಯವಿರುವುದರಿಂದ ಉಡುಪಿ ಜಿಲ್ಲಾಡಳಿತ ಮನೆಯಲ್ಲಿ ಇದ್ದ ಜನರನ್ನು ಕ್ರೇನ್ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ವರುಣನ ಆರ್ಭಟಕ್ಕೆ ಉಡುಪಿ ಜಿಲ್ಲೆ ಸಂಪೂರ್ಣ ತತ್ತರಗೊಂಡಿದ್ದು, ರಸ್ತೆಗಳು ಜಲಾವೃತವಾಗಿವೆ. ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಈಗಾಗಲೇ ಎನ್ ಡಿ ಆರ್ ಎಫ್ ತಂಡವನ್ನು ರವಾನಿಸಿದೆ.
ಇನ್ನು ದಕ್ಷಿಣ ಕನ್ನಡ, ಮಂಗಳೂರು ಗಡಿಭಾಗದಲ್ಲಿ ಮಳೆಯ ಆರ್ಭಟಕ್ಕೆ ನಂದಿ, ಶಾಂಭವಿ ನದಿ ಉಕ್ಕಿ ಹರಿಯುತ್ತಿದ್ದು, ಕಿನ್ನಿಗೋಳಿ ಸಮೀಪದ ತಗ್ಗುಪ್ರದೇಶ ಜಲಾವೃತಗೊಂಡಿದೆ. ಪರಿಣಾಮ ಕಿನ್ನಿಗೊಳಿ, ಕಿಲೆಂಜೂರು, ಪಂಜ, ಬಳ್ಕುಂಜೆಯಲ್ಲಿ ನೂರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಕರಾವಳಿ ಜನರಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇನ್ನು ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.