ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಮೂರು ಪಕ್ಷಗಳೂ ಆರ್‌ಆರ್ ನಗರದಲ್ಲಿ ತಮ್ಮ ಪ್ರಾಬ್ಯಲ್ಯ ತೋರಿಸಲು ಮುಂದಾಗುತ್ತಿವೆ. ಕಾಂಗ್ರೆಸ್ ಕುಸುಮಾ ಹನುಮಂತರಾಯಪ್ಪರನ್ನು ತನ್ನ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಡಿ.ಕೆ.ರವಿ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿರುವ ಕಾಂಗ್ರೆಸ್ ತಂತ್ರ ಅನೇಕ ಆಶ್ಚರ್ಯಗಳಿಗೆ ಎಡೆ ಮಾಡಿಕೊಟ್ಟಿದೆ.
ಕುಸುಮಾ ಚುನಾವಣೆಗೆ ನಿಂತ ಬೆನ್ನಲ್ಲೇ ಡಿ.ಕೆ.ರವಿ ಅಮ್ಮ ನನ್ನ ಮಗನ ಹೆಸರು ಬಳಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಸಂಸದೆ ಶೋಭಾ ಕರಂದ್ಲಾಜೆ ಕೂಡ ಡಿ.ಕೆ.ರವಿ ಹೆಸರು ಬಳಸಿ ಪ್ರಚಾರ ಮಾಡಿದರೆ ಒಳ್ಳೆಯದಾಗಲ್ಲ ಎಂಬ ಹೇಳಿಕೆ ನೀಡುವ ಮೂಲಕ ಕಿಚ್ಚು ಹಚ್ಚಿದ್ದಾರೆ. ಆದರೆ ಈ ಹೇಳಿಕೆಗೆ ಕುಸುಮಾ ನಯವಾಗಿಯೇ ತಿರುಗೇಟು ನೀಡಿದ್ದಾರೆ.
ಹೌದು, ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಮೂಲಕ ಕುಸುಮಾ ಅವರು ಶೋಭಾ ಕರಂದ್ಲಾಜೆಗೆ ಮಾತಿನಲ್ಲೇ ತಿವಿದಿದ್ದಾರೆ. ಪ್ರೀತಿಯ ಅಕ್ಕ, ನನ್ನ ಗಂಡನ ಹೆಸರಿನಲ್ಲಿ ರಾಜಕೀಯ ಮಾಡಿದವರು ಯಾರು? ಮಾಡುತ್ತಿರುವವರು ಯಾರು? ಎನ್ನುವುದನ್ನು ಇಡೀ ದೇಶವೇ ನೋಡಿದೆ, ನೋಡುತ್ತಿದೆ. ಈ ಸಂದರ್ಭದಲ್ಲಿ ನನಗೆ ಅಕ್ಕ ಮಹಾದೇವಿಯವರ ನೊಂದವರ ನೋವ ನೋಯದವರೆತ್ತ ಬಲ್ಲರೊ? ಎಂಬ ವಚನ ನೆನಪಿಗೆ ಬರುತ್ತಿದೆ. ರವಿ ಅವರ ಹೆಸರನ್ನು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದಿದ್ದೀರಿ. ಇದು ನಿಮಗೆ ನೀವೇ ಹೇಳಿದಂತೆ ಇದೆ. ಕನ್ನಡಿ ಮುಂದೆ ನಿಂತು ಇನ್ನೊಮ್ಮೆ ಈ ಹೇಳಿಕೆ ಕೊಟ್ಟು ನೋಡಿ. ಸತ್ಯ ಮನದಟ್ಟಾಗಬಹುದು ಎನ್ನುವ ಮೂಲಕ ಸರಿಯಾಗಿ ಚಾಟಿ ಬೀಸಿದ್ದಾರೆ.