ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಿದ್ದು, ಆರಂಭದಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದರು.
ಹೀಗಾಗಿ ಬಹಳಷ್ಟು ರೈತರು ತಾವು ಬೆಳೆದ ಬೆಳೆಯನ್ನು ಸಂಕಟದಿಂದಲೇ ನಾಶಪಡಿಸಿದ್ದರು. ಇದೀಗ ಈ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು ರೈತ ಮಹಿಳೆಯೊಬ್ಬರು ತಾವು ಬೆಳೆದ ಕಬ್ಬು ಮಾರಾಟವಾಗದ ಹಿನ್ನೆಲೆಯಲ್ಲಿ ಅದಕ್ಕೆ ಬೆಂಕಿಯಿಟ್ಟು ನಾಶಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹಾರಂಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತ ಮಹಿಳೆ ಯಶೋದಮ್ಮ ತಮ್ಮ 1.20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜ್ಯೂಸ್ ಕಬ್ಬಿಗೆ ಬೆಂಕಿ ಇಟ್ಟಿದ್ದಾರೆ. ಕಬ್ಬನ್ನು ಕೊಳ್ಳಲು ಖರೀದಿದಾರರು ಬಾರದೆ ಇರುವುದು ಹಾಗೂ ದರ ತೀವ್ರ ಕುಸಿತ ಕಂಡಿದ್ದರಿಂದ ಬೇಸತ್ತ ಅವರು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.