ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕನ್ನಡ ಕಿರುತೆರೆಯ ಇನ್ನಷ್ಟು ಕಲಾವಿದರು ಹಾಗೂ ಡಾನ್ಸರ್ ಗಳಿಗೆ ನಡುಕ ಶುರುವಾಗಿದೆ.
ಡ್ರಗ್ಸ್ ಪ್ರಕರಣದ ಮತ್ತೋರ್ವ ಆರೋಪಿ ಸ್ಯಾಮ್ ಫರ್ನಾಂಡೀಸ್ ಎಂಬಾತನನ್ನು ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಮಂಗಳೂರು ಮೂಲದವನೇ ಆದ ಈತ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದು, ನಿರೂಪಕಿ ಅನುಶ್ರೀ ಹಾಗೂ ಇನ್ನು ಹಲವು ಸ್ಟಾರ್ ನಟ-ನಟಿಯರ, ಕಿರುತೆರೆ ಕಲಾವಿದರ ಹೆಸರು ಹೇಳಿದ್ದಾನೆ. ಇವರೆಲ್ಲರೂ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು ಎಂದಿದ್ದಾನೆ.
ಮಂಗಳೂರಿನಲ್ಲಿ ಸ್ಟಾರ್ ಹೋಟೆಲ್ ಹಾಗೂ ಪಬ್ ಗಳಲ್ಲಿ ಮಿಡ್ ನೈಟ್ ಪಾರ್ಟಿ ನಡೆಯುತ್ತಿದ್ದು, ಈ ಪಾರ್ಟಿಗಳಿಗೆ ಅನುಶ್ರೀ ಕಿರುತೆರೆ ಕಲಾವಿದರನ್ನು ಹಾಗೂ ಡಾನ್ಸರ್ ಗಳನ್ನು ಕರೆ ತರುತ್ತಿದ್ದರು ಎಂದು ಹೇಳಿದ್ದಾನೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಅನುಶ್ರೀ ಸಂಪರ್ಕದಲ್ಲಿದ್ದ ಇನ್ನಷ್ಟು ಕಲಾವಿದರಿಗೆ ಸಿಸಿಬಿ ನೋಟೀಸ್ ನೀಡುವ ಸಾಧ್ಯತೆಯಿದೆ.