
ನಂಬರ್ ಪ್ಲೇಟ್ ಮೇಲೆ ವಾಹನ ನಂಬರ್ ಬಿಟ್ಟು ಬೇರೆ ಅಕ್ಷರಗಳನ್ನು ಬರೆಸಿಕೊಂಡರೆ ಅಂತಹ ನಂಬರ್ ಪ್ಲೇಟ್ ದೋಷಪೂರಿತ ಅಂತಾ ದಂಡ ಹಾಕೋದನ್ನು ನೋಡಿದ್ದೇವೆ. ಆದರೆ ವಾಹನದ ನಂಬರ್ನ ಕನ್ನಡದಲ್ಲಿ ಬರೆಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ದಂಡ ಹಾಕಲಾಗಿದೆ.
ಹೌದು, ಬೆಳಗಾವಿಯ ಜೀಜಾಮಾತ ವೃತ್ತದ ಬಳಿ ಈ ಘಟನೆ ನಡೆದಿದೆ. ನಂಬರ್ ಪ್ಲೇಟ್ ಕನ್ನಡದಲ್ಲಿ ಇದೆ ಎಂಬ ಕಾರಣಕ್ಕೆ ದೋಷಪೂರಿತ ನಂಬರ್ ಪ್ಲೇಟ್ ಎಂದು ಅಲ್ಲಿನ ಪೊಲೀಸರು ವಾಹನ ಸವಾರನಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ.
ಪೊಲೀಸರ ಈ ಕ್ರಮವನ್ನು ಅಲ್ಲಿನ ಕನ್ನಡ ಸಂಘಟನೆಗಳು ವಿರೋಧ ಮಾಡುತ್ತಿವೆ. ಮರಾಠಿಗರು ಎಷ್ಟೋ ಜನ ಕನ್ನಡಿಗರನ್ನು ಕೆಣಕುವಂತಹ ಘೋಷಣೆಗಳನ್ನು ವಾಹನದ ಮೇಲೆ ಹಾಕಿಕೊಂಡಿರುತ್ತಾರೆ. ಅಂತವರಿಗೆ ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಕನ್ನಡದಲ್ಲಿ ನಂಬರ್ ಪ್ಲೇಟ್ ಬರೆಸಿದ್ದಕ್ಕೆ ದಂಡ ಹಾಕಿದರೆ ಹೇಗೆ ಎನ್ನುತ್ತಿದ್ದಾರೆ.