ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಪೀರನವಾಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ರಾತ್ರೋ ರಾತ್ರಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರ ಇದೀಗ ಮರಾಠಿಗರು ಹಾಗೂ ಕನ್ನಡಿಗರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಪೀರನವಾಡಿಯಲ್ಲಿ ಶಿವಾಜಿ ಪ್ರತಿಮೆ ಎದುರೇ ಬೆಳಗಾಗುವಷ್ಟರಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದಂತೆಯೇ ಸ್ಥಳದಲ್ಲಿ ಜಮಾವಣೆಗೊಂಡಿದ್ದ ರಾಯಣ್ಣ ಅಭಿಮಾನಿಗಳು ಹಾಗೂ ಮರಾಠಿಗರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ವಾಪಸ್ ಕಳುಹಿಸಿದ್ದಾರೆ. ಆದಾಗ್ಯೂ ಮರಾಠಿ ಪುಂಡರು ಕನ್ನಡಿಗರ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ.
ಧ್ವಜ ಹಿಡಿದು ಹೋಗುತ್ತಿದ್ದ ಕನ್ನಡಿಗರ ಮೇಲೆ ಮರಾಠಿ ಪುಂಡರು ಚಪ್ಪಲಿ ಎಸೆದಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ತಕ್ಷಣ ಪೊಲೀಸರು ಕಿಡಿಗೇಡಿಗಳ ಮೇಲೆ ಲಾಠಿ ಬೀಸಿದ್ದಾರೆ. ಮರಾಠಿ ಪುಂಡರ ಜತೆಗೆ ಶಿವಸೇನೆ ಕಾರ್ಯಕರ್ತರೂ ಕೂಡ ಸೇರಿದ್ದು ಇದೀಗ ಕನ್ನಡಿಗರು ಹಾಗೂ ಮರಾಠಿಗರ ಸಂಘರ್ಷ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.