ನವದೆಹಲಿ: ರಾಜ್ಯಸಭಾ ಸದಸ್ಯರಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಭಾನುವಾರ ಕೂಡ ಅಧಿವೇಶನ ನಡೆಯುತ್ತಿದೆ.
ಇಂದು ಬೆಳಿಗ್ಗೆ ರಾಜ್ಯಸಭೆಯ ಸಭಾಧ್ಯಕ್ಷ ವೆಂಕಯ್ಯನಾಯ್ಡು ಸಮ್ಮುಖದಲ್ಲಿ ರಾಜ್ಯಸಭಾ ಸದಸ್ಯರಾಗಿ ಹೆಚ್.ಡಿ. ದೇವೇಗೌಡರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ದೇವೇಗೌಡರು 24 ವರ್ಷಗಳ ಬಳಿಕ ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದಾರೆ. ಈ ಹಿಂದೆ ಪ್ರಧಾನ ಮಂತ್ರಿಯಾಗಿದ್ದ ವೇಳೆ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದರು.
ರಾಜ್ಯಸಭೆಯಲ್ಲಿ ತೆರವಾದ ನಾಲ್ಕು ಸ್ಥಾನಗಳಿಗಾಗಿ ಜೂನ್ 12ರಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.