ಹುಬ್ಬಳ್ಳಿ: ಕನಕಪುರದ ಗೂಂಡಾಗಿರಿ ಬೆಂಗಳೂರಿನಲ್ಲಿ ನಡೆಯುವುದಿಲ್ಲ. ಗಲಭೆಕೋರರ ಹಿಂದೆ ನಿಂತು ಕಮೀಷನರ್ ಗೆ ಧಮ್ಕಿ ಹಾಕುತ್ತಿರುವುದು ಎಷ್ಟು ಸರಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಡಿ.ಕೆ ಶಿವಕುಮಾರ್ ನೀಡಿರುವ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿ, ಬೇಲ್ ಮೇಲೆ ಹೊರಗಿದ್ದೇನೆ ಎಂಬುದನ್ನು ಡಿಕೆಶಿ ನೆನಪಲ್ಲಿಟ್ಟುಕೊಳ್ಳಲಿ. ಡಿಕೆಶಿ ವಿರುದ್ಧದ ಯಾವುದೇ ಪ್ರಕರಣ ಮುಕ್ತಾಯವಾಗಿಲ್ಲ. ಜೈಲಲ್ಲಿದ್ದು ಬಂದು ಬೇರೆಯವರ ನೈತಿಕತೆ ಬಗ್ಗೆ ಮಾತನಾಡುವುದು ಎಷ್ಟು ಸರಿ? ಗಲಭೆಕೋರರ ಹಿಂದೆ ನಿಂತು ಕಮೀಷನರ್ ಗೆ ಧಮ್ಕಿ ಹಾಕುವುದು ಎಂದರೆ ಏನು? ಕನಕಪುರದ ಗೂಂಡಾಗಿರಿ ಅಲ್ಲಿಗೆ ಮುಗಿಯಲಿ ಎಂದು ಗುಡುಗಿದರು.
ರಾಜ್ಯ ಸರ್ಕಾರದ ಯಶಸ್ಸು ಸಹಿಸಿಕೊಳ್ಳಲಾಗದೇ ಈಗ ಡಿಕೆಶಿ ತಮ್ಮ ಫೋನ್ ಕದ್ದಾಲಿಕೆಯಾಗಿದೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ಶಾಸಕ ಜಮೀರ್ ಅಹ್ಮದ್ ಬೆಂಗಳೂರು ಗಲಭೆಕೋರರಿಗೆ ಆರ್ಥಿಕ ನೆರವು ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಗೂಂಡಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಜಮೀರ್ ನಡೆ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.