ಬೆಂಗಳೂರು: ವಿಜೃಂಭಣೆಯಿಂದ ನಡೆಯುವ ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆಗೆ ಈ ಬಾರಿ ಬ್ರೇಕ್ ಬೀಳುವ ಸಾಧ್ಯತೆಯಿದೆ. ಕೊರೊನಾ ಹಿನ್ನೆಲೆಯಲ್ಲಿ ಕಡಲೆಕಾಯಿ ಪರಿಷೆ ಸರಳವಾಗಿ ಆಚರಣೆ ಮಾಡಬೇಕು, ಕೇವಲ ಸಾಂಪ್ರದಾಯಿಕ ಪೂಜೆಗಷ್ಟೇ ಅವಕಾಶ ನೀಡಬೇಕು ಎಂದು ಶಾಸಕ ರವಿಸುಬ್ರಹ್ಮಣ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಾರ್ತಿಕ ಮಾಸದ ಕೊನೆ ಸೋಮವಾರದಿಂದ ಬೆಂಗಳೂರಿನ ಬಸವನಗುಡಿಯಲ್ಲಿ ಪಾರಂಪರಿಕ ಕಡಲೆಕಾಯಿ ಪರಿಷೆ ಆರಂಭವಾಗುತ್ತದೆ. ವಿವಿಧ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಕಡೆಲೆಕಾಯಿ ಬೆಳೆಗಾರರು ತಮ್ಮ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿ ಬಳಿಕ ಪರಿಷೆ ನಡೆಸುವುದು ಪದ್ಧತಿ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಪರಿಷೆಗೆ ಅವಕಾಶ ನೀಡಬಾರದು ಎಂಬುದು ಶಾಸಕರ ಒತ್ತಾಯ.
ಸಂಪ್ರದಾಯದಂತೆ ದೊಡ್ಡ ಗಣಪತಿಗೆ ಹಾಗೂ ಬಸವನಿಗೆ ಪೂಜೆ ಸಲ್ಲಿಸುವ ಮೂಲಕ ಕಡಲೆಕಾಯಿ ಪರಿಷೆ ಆಚರಿಸುವುದು ಉತ್ತಮ. ಮೂರು ದಿನಗಳ ಕಾಲ ಪರಿಷೆ ನಡೆಸುವುದರಿಂದ ಜನಜಂಗುಳಿ ಹೆಚ್ಚಿ, ಸಾಮಾಜಿಕ ಅಂತರ ಪಾಲನೆ ಕಷ್ಟಸಾಧ್ಯ. ಇದರಿಂದ ಕೊರೊನಾ ಸೋಂಕು ಹೆಚ್ಚುವ ಸಾಧ್ಯತೆಯಿದೆ ಎಂಬುದು ಶಾಸಕರ ಆತಂಕ. ಹೀಗಾಗಿ ಈ ಬಾರಿ ಕಡಲೆಕಾಯಿ ಪರಿಷೆ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.