ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದ, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ನೀಡಿದ್ದು, ನೀವು ಬಳಸುತ್ತಿರುವ ಪದಗಳೇ ಯಾರು ಕಾಡು ಮನುಷ್ಯ ಎಂಬುದನ್ನು ಸಾಬೀತು ಪಡಿಸುತ್ತಿದೆ ಎಂದು ಹೇಳಿದೆ.
ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿರುವ ಬಿಜೆಪಿ, ಕಾಡುಮನುಷ್ಯ, ನಾಲಾಯಕ್, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದವ ಎಂಬ ನಿಮ್ಮ ಮಾತುಗಳೇ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ನೀವು ಐ ಎನ್ ಸಿ ಕರ್ನಾಟಕದ ವಿದೂಷಕ ಇದ್ದ ಹಾಗೆ ಹಾಗಿದೆ ಎಂದು ಹೇಳಿದೆ.
ಸಿದ್ದರಾಮಯ್ಯನವರೇ ನೀವು ಕಾಂಗ್ರೆಸ್ ಸೇರುವುದುಕ್ಕೂ ಮುನ್ನ ಮೊದಲು ಜೆಡಿಎಸ್ ನಲ್ಲಿ ಸಕಲ ಅಧಿಕಾರ ಭಾಗ್ಯಗಳನ್ನು ಅನುಭವಿಸಿ, ಅವರಿಗೇ ನಾಮ ಹಾಕಿದ ಮಹಾನುಭಾವರು. ಚುನಾವಣೆಯಲ್ಲಿ ಸ್ವಾರ್ಥಕ್ಕಾಗಿ ಪರಮೇಶ್ವರರನ್ನೇ ಸೋಲಿಸಿದ ಕುತಂತ್ರಿ ನೀವು. ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉನ್ನತ ಸ್ಥಾನ ಸಿಗುವುದೆಂದು ನೀವೇ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಎಂದಿದೆ.
ಜನರ ಭಾವನೆಗೆ ಸ್ಪಂದಿಸದ ನಿಮ್ಮನ್ನು ಸ್ವಕ್ಷೇತ್ರ ಚಾಮುಂಡೇಶ್ವರಿಯ ಮತದಾರರು ʼಬೀದಿಯಲ್ಲಿ ಅಲೆಯುವಂತೆʼ ಮಾಡಿದ್ದಾರೆ ಎಂಬುದನ್ನು ಮರೆಯಬೇಡಿ. ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮ ಸ್ಥಿತಿ ಉಗುರು ಮತ್ತು ಹಲ್ಲು ಇಲ್ಲದ ಹುಲಿಯ ಪರಿಸ್ಥಿತಿಯಂತಾಗಿದೆ ಎಂದು ವ್ಯಂಗ್ಯವಾಡಿದೆ.
ಈ ಹಿಂದಿನ ಉಪಚುನಾವಣೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರ ನಾಯಕತ್ವದಲ್ಲಿ 15 ಕ್ಷೇತ್ರಗಳಲ್ಲಿ 12 ಸ್ಥಾನ ಗೆದ್ದು ಬಿಎಸ್ ವೈ ಅವರ ಬಿಜೆಪಿ ಗದ್ದುಗೆ ಬಲಪಡಿಸಿದ್ದೇವೆ. ಈ ಉಪ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.