ಕಲಬುರ್ಗಿ: ಬಿಜೆಪಿ ಸರ್ಕಾರ ಜನರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಆರ್ಥಿಕ ದುಸ್ಥಿತಿ ಎದುರಾಗಿದೆ. ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಸಚಿವರು, ಸಂಸದರು ಮಾತ್ರ ತಮ್ಮ ಕುರ್ಚಿಗಾಗಿ ಓಡಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯ ಬಿಜೆಪಿ ಒಡೆದ ಮನೆಯಂತಾಗಿದೆ. ಕೆಲವರು ಮಂತ್ರಿಯಾಗಲು ಓಡಾಡಿದರೆ ಇನ್ನು ಕೆಲವರು ಮುಖ್ಯಮಂತ್ರಿಯಾಗಲು ಓಡಾಡುತ್ತಿದ್ದಾರೆ. ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಲವು ಘೋಷಣೆ ಮಾಡುತ್ತಿದ್ದಾರೆ. ಒಟ್ಟಾರೆ ಗಂಡ-ಹೆಂಡತಿ ಜಗಳದಲ್ಲಿ ರಾಜ್ಯದ ಜನತೆ ಬಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರಾಜ್ಯ ಬಿಜೆಪಿ ಸಂಸದರು ದೆಹಲಿಯ ಚಾಂದಿನಿ ಚೌಕ್ ನಲ್ಲಿ ಪಾನಿಪೂರಿ ತಿನ್ನುವ ಸ್ಥಿತಿ ಬಂದಿದೆ. ಅವರು ರಾಜ್ಯಕ್ಕಾಗಿ, ಕನ್ನಡಿಗರ ಹಿತ ಕಾಯಲು ಪ್ರಧಾನಿ ಮೋದಿ ಬಳಿ ಏನನ್ನೂ ಕೇಳುವ ಸ್ಥಿತಿಯಿಲ್ಲ. ರಾಜ್ಯದ ಜನರ ಹಿತ ಕಾಯುವುದು ಸಂಸದರಿಗೆ, ಸಚಿವರಿಗೆ ಬೇಕಾಗಿಲ್ಲ ಎಂದು ಗುಡುಗಿದರು.