ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಏಪ್ರಿಲ್ ನಂತರ ಇಳಿಸುತ್ತಾರೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ.
ನನಗೆ ಆರ್.ಎಸ್.ಎಸ್.ಮೂಲಗಳಿಂದ ಖಚಿತ ಮಾಹಿತಿ ಬಂದಿದ್ದು, ಯಡಿಯೂರಪ್ಪನವರನ್ನು ಏಪ್ರಿಲ್ ಬಳಿಕ ಅಧಿಕಾರದಿಂದ ಕೆಳಗಿಳಿಸಲಾಗುತ್ತಿದೆ. ಅಮಿತ್ ಶಾ ಯಡಿಯೂರಪ್ಪ ಮುಂದುವರೆಯಲಿದ್ದಾರೆ ಎಂದಿದ್ದಾರೆ. ಮತ್ತಿನ್ನೇನು ಯಡಿಯೂರಪ್ಪರನ್ನು ತೆಗೆಯುತ್ತೇನೆ ಎಂದು ನೇರವಾಗಿ ಹೇಳಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಿಡಿ ಬ್ಲಾಕ್ ಮೇಲ್ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಈ ವಯಸ್ಸಲ್ಲಿ ಏನೇನು ಮಾಡಿದ್ದಾರೋ ಯಾರಿಗೆ ಗೊತ್ತು? ಸಿಡಿ ವಿಚಾರ ತನಿಖೆಯಾಗಬೇಕು. ಸಿಡಿಯಲ್ಲಿ ಏನಿದೆ ಎಂಬುದು ಗೊತ್ತಾಗಬೇಕಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.