ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಗಂಭೀರ ಪ್ರಕರಣವಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಗೆ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರೂ ಕೂಡ ಮತ್ತೊಮ್ಮೆ ವಿಚಾರಣೆಗೆ ಗೈರಾಗಿದ್ದಾರೆ. ಕೊರೊನಾ ನೆಗೆಟಿವ್ ಬಂದಿದ್ದರೂ ಕೂಡ ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್ ನಲ್ಲಿದ್ದು, ಆರೋಗ್ಯ ಚೇತರಿಕೆ ಕಂಡುಬಂದಿಲ್ಲ ಎಂಬ ನೆಪವೊಡ್ಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕೊರೊನಾ ಚೈನ್ ಲಿಂಕ್ ಮುರಿಯಲು 14 ದಿನ ಕಠಿಣ ಕ್ರಮ; ಜನರು ಗಂಭೀರವಾಗಿ ಸರ್ಕಾರದ ನಿಯಮ ಪಾಲಿಸಿ ಎಂದ ಸಚಿವರು
ಈ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅತ್ಯಾಚಾರ ಆರೋಪಿ ತಲೆ ಮರೆಸಿಕೊಂಡಿದ್ದಾರೆಯೇ? ಬಂಧನವೂ ಆಗಿಲ್ಲ, ವಿಚಾರಣೆಗೂ ಬಂದಿಲ್ಲ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ, ಎಸ್ಐಟಿ ರಚಿಸಿದ್ದು ಆರೋಪಿಯ ರಕ್ಷಣೆಗಾಗಿ ಎಂದು ಬಹಿರಂಗವಾಗಿ ಒಪ್ಪಿಕೊಂಡುಬಿಡಿ, ಇಲ್ಲವೇ ಆರೋಪಿಯನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸಿದೆ.
ಕೊರೊನಾ ಸಂಕಟದ ನಡುವೆ ಗಂಭೀರ ಪ್ರಕರಣವೊಂದನ್ನು ಮುಚ್ಚಿ ಹಾಕುವ ಸರ್ಕಾರದ ಹುನ್ನಾರ ಜನತೆಗೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.