ಬದುಕು ಯಾವ ಕ್ಷಣದಲ್ಲಿ ಹೇಗೆ ಬೇಕಾದರೂ ಬದಲಾಗಬಹುದು ಎಂಬುದಕ್ಕೆ ಸದ್ಯದ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಚೀನಾದಲ್ಲಿ ಹುಟ್ಟಿಕೊಂಡ ಈ ಕೊರೊನಾ ಈಗ ಎಲ್ಲರ ಎದೆಯಲ್ಲೂ ಒಂದು ರೀತಿಯ ಭಯ, ಅಭದ್ರತೆಯನ್ನು ಮೂಡಿಸಿದೆ.
ಯಾವುದೇ ಭಯವಿಲ್ಲದೇ, ಹೊರಗಡೆ ತಿಂದುಕೊಂಡು, ಮನ ಬಯಸಿದ್ದಲ್ಲಿ ಸುತ್ತಾಡಿಕೊಂಡು ಆರಾಮಾಗಿದ್ದೇವು. ಸಭೆ, ಸಮಾರಂಭಗಳನ್ನೆಲ್ಲಾ ಮಾಡಿಕೊಂಡು ಬಂಧು ಬಳಗವೆಲ್ಲಾ ಸೇರಿಕೊಂಡು ಖುಷಿ ಹಂಚಿಕೊಳ್ಳುತ್ತಿದ್ದ ಕಾಲ ಈಗ ಇಲ್ಲ.
ಹೋಟೆಲ್, ಶಾಪಿಂಗ್ ಮಾಲ್ ಗಳು ಈಗ ತೆರೆದಿದ್ದರೂ ಜನ ಹೋಗುವುದಕ್ಕೆ ಭಯ ಪಡುತ್ತಾರೆ. ಇದರಿಂದ ಅಲ್ಲಿನ ವ್ಯಾಪಾರ, ವಹಿವಾಟುಗಳು ನಿಂತಿದೆ.
ಇನ್ನು ನಮ್ಮದೇ ಪರಿಚಿತರು ಕೂಡ ಅಪರಿಚಿತರಾಗುತ್ತಿದ್ದಾರೆ. ಒಬ್ಬರ ಮನೆಗೆ ಇನ್ನೊಬ್ಬರು ಹೋಗುವುದಕ್ಕೂ ಹಿಂದು ಮುಂದೆ ನೋಡುತ್ತೇವೆ. ಇದರ ಜತೆಗೆ ಕೆಲಸದ ಅಭದ್ರತೆ ಕೂಡ ಕಾಡುತ್ತಿದೆ. ಮುಂದೇನು ಎಂಬ ಚಿಂತೆ ಎಲ್ಲರಲ್ಲೂ ಮೂಡುತ್ತಿದೆ. ಸರಿಯಾದ ಕೆಲಸವಿಲ್ಲದೇ ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ದುಡ್ಡು ಇದ್ದವರಿಗೆ ಒಂದು ಚಿಂತೆಯಾದರೆ ದುಡ್ಡು ಇಲ್ಲದವರಿಗೆ ಇನ್ನೊಂದು ರೀತಿಯ ಚಿಂತೆ ಕಾಡುತ್ತಿದೆ.
ಇನ್ನು ಮಕ್ಕಳ ವಿದ್ಯಾಭ್ಯಾಸ ಕೂಡ ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಒಟ್ಟಾರೆ ಈ ಕೊರೊನಾದಿಂದ ಬದುಕು ಅಸ್ತವ್ಯಸ್ತವಾಗಿದೆ.