ಬೀದರ್: ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಏಪ್ರಿಲ್ 18ರಂದು ಸಿಎಂ ಯಡಿಯೂರಪ್ಪ ಕರೆದಿರುವ ಸರ್ವಪಕ್ಷ ಸಭೆ ಬಗ್ಗೆ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸೋಂಕು ಹರಡುವಷ್ಟು ಹರಡಿದ ಮೇಲೆ ಈಗ ಸಭೆ ಕರೆದು ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ಬಸವಕಲ್ಯಾಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಜನವರಿ, ಫೆಬ್ರವರಿಯಲ್ಲಿಯೇ ತಜ್ಞರು ರಾಜ್ಯ ಸರ್ಕಾರಕ್ಕೆ ವೈರಸ್ ವೇಗವಾಗಿ ಹರಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೂ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಂಡು ಜನರ ಜೀವದ ಜೊತೆ ಚೆಲ್ಲಾಟವಾಡಿದೆ. ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರು, ಶಾಸಕರವರೆಗೂ ಎಲ್ಲರೂ ಉಪಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಸರ್ಕಾರಕ್ಕೆ ಜನರ ಜೀವಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ. ರಾಜ್ಯದಲ್ಲಿ ಇಂಥ ಕೆಟ್ಟ ಸರ್ಕಾರವನ್ನು ಈವರೆಗೂ ನೋಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿ ಮೇಲೆ ಅಭ್ಯರ್ಥಿಯ ಚುನಾವಣಾ ಪೋಸ್ಟರ್….! ಕೆಂಗಣ್ಣು ಬೀರಿದ ಪ್ರಾಣಿಪ್ರಿಯರು
ಕೋವಿಡ್ ನಿಯಂತ್ರಣಕ್ಕೆಂದು ರಾಜ್ಯ ಸರ್ಕಾರ ಪ್ರಕಟಿಸುತ್ತಿರುವ ಗೈಡ್ ಲೈನ್ ಬೆಳಿಗ್ಗೆಯೊಂದಿದ್ದರೆ ಸಂಜೆ ಮತ್ತೊಂದು ಪ್ರಕಟವಾಗುತ್ತಿದೆ. ಇನ್ನು ನೈಟ್ ಕರ್ಫ್ಯೂ ವಿಚಾರವಂತು ಹಾಸ್ಯಾಸ್ಪದ. ರಾತ್ರಿ ಕರ್ಫ್ಯೂ ಜಾರಿಯಿಂದ ಯಾರಿಗೆ ಪ್ರಯೋಜನ? ಬೆಳಿಗ್ಗೆಯಲ್ಲಾ ಓಡಾಡಲು ಬಿಟ್ಟು, ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಕರ್ಫ್ಯೂ ಜಾರಿಮಾಡಿದ್ದಾರೆ. ಕರ್ಫ್ಯೂ ಆರಂಭವಾಗುವಷ್ಟರಲ್ಲಿ ಶೇ.90ರಷ್ಟು ಜನರು ಮನೆಗೆ ಹೋಗಿರುತ್ತಾರೆ. ಊರೆಲ್ಲ ಕೊರೊನಾ ಹರಡಿದ ಮೇಲೆ ಈಗ ಸರ್ವ ಪಕ್ಷ ಸಭೆ ಬೇರೆ ಕರೆದಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ ಎಂದು ಕಿಡಿಕಾರಿದ್ದಾರೆ.