ಬೆಂಗಳೂರು: ನನ್ನ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ನಾನು ಸಿಎಂ ಗಮನಕ್ಕೆ ತಂದಿದ್ದೆ. ಈ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೂ ತಂದಿದ್ದೆ ಹೊರತು ಯಾರ ವಿರುದ್ಧವೂ ದೂರು ನೀಡಿಲ್ಲ. ದೂರು ನೀಡುವುದಕ್ಕೂ ಮಾಹಿತಿ ನೀಡುವುದಕ್ಕೂ ವ್ಯತ್ಯಾಸವಿದೆ ಅದನ್ನು ಮಾಧ್ಯಮಗಳು ಅರ್ಥಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗಿಬಿದ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಕತ್ತು ಕೊಯ್ದರೂ ನಾನು ಪಕ್ಷದ ವಿರುದ್ಧ ಹೋಗುವುದಿಲ್ಲ. ರಾಜಭವನಕ್ಕೆ ಹೋಗಿದ್ದರ ಅಂಶವನ್ನು ಸ್ಪಷ್ಟಪಡಿಸುತ್ತೇನೆ. ನಾನು ಯಾರ ಬಗ್ಗೆ ದೂರು ನೀಡಲೆಂದು ಹೋಗಿಲ್ಲ. ಸಿಎಂ ಯಡಿಯೂರಪ್ಪ ವಿರುದ್ಧವೂ ದೂರು ನೀಡಿಲ್ಲ. ಅವರು ನಮ್ಮ ನಾಯಕರು. ನಮ್ಮ ಮುಖ್ಯಮಂತ್ರಿಗಳು ಹೀಗಿರುವಾಗ ನಾನು ದೂರು ನೀಡುವ ಪ್ರಶ್ನೆ ಬರಲ್ಲ ಎಂದರು.
ಇಲಾಖೆಯಲ್ಲಿನ ಸಮಸ್ಯೆ ಬಗ್ಗೆ ನಾನು ನಮ್ಮ ನಾಯಕರಿಗೆ ಪತ್ರ ಬರೆದಿದ್ದೇನೆ. ನಮ್ಮ ನಾಯಕರಿಗೆ ಪತ್ರ ಬರೆಯದೇ ದೇವೇಗೌಡರಿಗೆ, ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆಯಲಾ? ನಾನು ಸಿಎಂ ವಿರುದ್ಧ ಯಾವುದೇ ದೂರನ್ನೂ ನೀಡಿಲ್ಲ. ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ. ನೀವು ಬೇಕಿದ್ದರೆ ಸಿಎಂ ಯಡಿಯೂರಪ್ಪನವರಿಗೂ ನನಗೂ ಆಗುವುದಿಲ್ಲ ಎಂದೇ ಬರೆದುಕೊಳ್ಳಿ ಎಂದು ಸುದ್ದಿಗಾರರ ವಿರುದ್ಧವೇ ಸಿಡಿದೆದ್ದಿದ್ದಾರೆ.