ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲವನ್ನುಂಟು ಮಾಡಿದೆ. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ಕಾರಿನಲ್ಲಿ ತೆರಳಿದ್ದ ಅವರು ಬಳಿಕ ಚಾಲಕನನ್ನು ಕಳುಹಿಸಿ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ.
ಧರ್ಮೇಗೌಡ ತಮ್ಮ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆನ್ನಲಾಗಿದ್ದು, ಇದರಲ್ಲಿ ಹಲವು ವಿಷಯಗಳ ಜೊತೆಗೆ ಇತ್ತೀಚೆಗೆ ವಿಧಾನಪರಿಷತ್ ನಲ್ಲಿ ನಡೆದ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯ ಬಳಿಕವೇ ಡೆತ್ ನೋಟ್ ಕುರಿತ ಸತ್ಯಾಸತ್ಯತೆ ಬಯಲಿಗೆ ಬರಲಿದೆ.
ಮೂಲಗಳ ಪ್ರಕಾರ ವಿಧಾನಪರಿಷತ್ ಸಭಾಪತಿ ಸ್ಥಾನದಲ್ಲಿ ತಾವು ಕುಳಿತಿದ್ದ ವೇಳೆ ಕೆಲವು ಸದಸ್ಯರು ಅವಮಾನಕರ ರೀತಿಯಲ್ಲಿ ತಮ್ಮನ್ನು ಕೆಳಗಿಳಿಸಿದ್ದ ಘಟನೆಯಿಂದ ಧರ್ಮೇಗೌಡ ಮನನೊಂದಿದ್ದರು ಎಂದು ಹೇಳಲಾಗಿದೆ. ಅಲ್ಲದೇ ತಮ್ಮ ಆಪ್ತರ ಬಳಿಯೂ ಧರ್ಮೇಗೌಡ ಈ ವಿಚಾರವನ್ನು ಹಂಚಿಕೊಂಡಿದ್ದರು ಎನ್ನಲಾಗಿದೆ. ಧರ್ಮೇಗೌಡರ ಆತ್ಮಹತ್ಯೆಗೆ ಪರಿಷತ್ ಗಲಾಟೆಯೂ ಕಾರಣವಾಯಿತಾ ಎಂಬುದು ತನಿಖೆ ಬಳಿಕವಷ್ಟೇ ಹೊರಬರಲಿದೆ.